ಬೆಂಗಳೂರು: ವಿಧಾನಸಭೆಯಲ್ಲಿ ಶಾಸಕರು ಮಧ್ಯಾಹ್ನದ ವೇಳೆ ಸಣ್ಣ ನಿದ್ರೆ ಮಾಡಲು ಅನುಕೂಲವಾಗುವಂತಹ ಚೇರ್ ವಿಚಾರವಾಗಿ ಎದ್ದಿರುವ ವಿವಾದಗಳಿಗೆ ಸ್ಪಿಕರ್ ಯುಟಿ ಖಾದರ್ ಸ್ಪಷ್ಟನೆ ನೀಡಿದ್ದು ಇದಕ್ಕೆ ಯಾವುದೇ ಖರ್ಚು ಮಾಡಿಲ್ಲ ಎಂದಿದ್ದಾರೆ.
ಒಂದೆಡೆ ರಾಜ್ಯದಲ್ಲಿ ಗೃಹಲಕ್ಷ್ಮಿ ಹಣ, ಅನ್ನಭಾಗ್ಯ ಹಣ ಬಂದಿಲ್ಲ ಎಂಬ ಆಕ್ರೋಶವಿದೆ. ಇನ್ನೊಂದೆಡೆ ಯೋಜನೆಗಳಿಗೆ ಅನುದಾನ ಸಿಗುತ್ತಿಲ್ಲ ಎಂಬ ಆಕ್ರೋಶವಿದೆ. ಈ ನಡುವೆ ಶಾಸಕರಿಗಾಗಿ ಸ್ಪೀಕರ್ ಐಷಾರಾಮಿ ಚೇರ್ ತರಿಸಿದ್ದು ಸರಿಯಾ ಎಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಯುಟಿ ಖಾದರ್ ಈ ಎಲ್ಲಾ ಆಕ್ರೋಶಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಾವು ವಿಧಾನಸಭೆಗೆ ತರಿಸಿದ ಚೇರ್ ದುಡ್ಡು ಕೊಟ್ಟು ತಂದಿದ್ದಲ್ಲ. ಒಂದು ಕಂಪನಿಯವರು ಡೆಮೋಗೆ ಅಂತ ಕೊಟ್ಟಿದ್ದು. ದುಡ್ಡು ಖರ್ಚಿಲ್ಲದೇ ಶಾಸಕರ ಅನುಕೂಲಕ್ಕೆ ಏನು ಮಾಡಬಹುದೋ ಅದನ್ನು ಮಾಡಿದ್ದೇನಷ್ಟೇ ಎಂದಿದ್ದಾರೆ.
ಇನ್ನು, ಈ ಬಗ್ಗೆ ವಿಪಕ್ಷಗಳು ಟೀಕೆ ಮಾಡುವುದಕ್ಕೆ ಅರ್ಥವಿಲ್ಲ. ಯಾಕೆಂದರೆ ಈ ಚೇರ್ ಕೇವಲ ಆಡಳಿತ ಪಕ್ಷದ ಶಾಸರಿಗಾಗಿ ತರಿಸಿದ್ದಲ್ಲ. ವಿಪಕ್ಷದವರೂ ಉಪಯೋಗಿಸಬಹುದು ಎಂದಿದ್ದಾರೆ.
ಈ ಚೇರ್ ಎಲ್ಲರಿಗೂ ಸಾಕಾಗುತ್ತಿಲ್ಲ ಎಂಬ ಆರೋಪಗಳಿಗೆ ಹಾಸ್ಯಭರಿತವಾಗಿ ಉತ್ತರಿಸಿದ ಯುಟಿ ಖಾದರ್, ಎಲ್ಲರಿಗೂ ಚೇರ್ ತರಿಸಿ ಎಲ್ಲರೂ ನಿದ್ರೆ ಮಾಡುತ್ತಿದ್ದರೆ ಮತ್ತೆ ಕಲಾಪದಲ್ಲಿ ನಾನು ಒಬ್ಬ ಏನು ಮಾಡಬೇಕು ಎಂದಿದ್ದಾರೆ.