ಚಡ್ಡಿಗಳ ಮಾರಣಹೋಮ ಎಂದು ಪತ್ರಿಕೆಯಲ್ಲಿ ಬರೆಯದಿದ್ದರೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗುತ್ತಿರಲಿಲ್ಲ ಎಂದು ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದೆ.
ಶಾಸಕ ಜೀವರಾಜ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಶಾಸಕರ ಹೇಳಿಕೆಯ ಅರ್ಥವೇನು? ಹತ್ಯೆಯ ಹಿಂದೆ ನಾವಿದ್ದೇವೆ ಎನ್ನುವ ಅರ್ಥವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತ್ರ ಜೀವರಾಜ್ ಹೇಳಿಕೆಗೆ ಸದ್ಯಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ. ತನಿಖೆಯ ಫಲಿತಾಂಶ ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಶಾಸಕ ಡಿ.ಎನ್. ಜೀವರಾಜ್ ನೀಡಿದ ಹೇಳಿಕೆಯಿಂದ ಬಿಜೆಪಿ ವಲಯದಲ್ಲಿ ಕೋಲಾಹಲ ಸ್ಪಷ್ಟಿಯಾಗಿದೆ. ವಿಪಕ್ಷಗಳನ್ನು ಯಾವ ರೀತಿ ಎದುರಿಸಬೇಕು ಎನ್ನುವ ಬಗ್ಗೆ ಬಿಜೆಪಿ ನಾಯಕರು ತಲೆಕಡಿಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸಾರ್ವಜನಿಕರು ಮತ್ತು ಕಾಂಗ್ರೆಸ್ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಜೀವರಾಜ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.