ಎಸ್ ಎಸ್ ಎಲ್ ಸಿ ಶುಲ್ಕ ಏರಿಕೆ

ಬುಧವಾರ, 8 ಡಿಸೆಂಬರ್ 2021 (20:08 IST)
ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಒಮೈಕ್ರಾನ್‌ ವೈರಸ್‌ ಭೀತಿ ನಡುವೆಯೇ 2021-22ನೇ ಸಾಲಿನ ಎಸ್‌ಎಸ್ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿರುವ ರಾಜ್ಯ ಸರ್ಕಾರವು ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿದೆ. ಪ್ರತಿ ವಿದ್ಯಾರ್ಥಿಯಿಂದ 35 ರು.ನಷ್ಟು ಹೆಚ್ಚು ಶುಲ್ಕ ವಸೂಲು ಮಾಡಲು ಮುಂದಾಗಿದೆ.
 
ಶಾಲೆ ಮತ್ತು ಕಾಲೇಜುಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಮತ್ತು ಶಾಲಾ ಮಕ್ಕಳ ಪೋಷಕರಿಗೂ ಲಸಿಕೆ ಕಡ್ಡಾಯಗೊಳಿಸಿರುವುದಕ್ಕೆ ಬಲವಾದ ಆಕ್ಷೇಪಗಳು ಕೇಳಿ ಬಂದಿರುವ ಬೆನ್ನಲ್ಲೇ ಪೂರ್ವ ಸಿದ್ಧತಾ ಪರೀಕ್ಷೆ ಶುಲ್ಕ ಹೆಚ್ಚಳಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಪರೀಕ್ಷಾ ಶುಲ್ಕ ಹೆಚ್ಚಳ ಮಾಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಅನುಮತಿ ನೀಡಿರುವ ರಾಜ್ಯ ಸರ್ಕಾರವು 2021ರ ಡಿಸೆಂಬರ್‌ 6ರಂದು ಆದೇಶ ಹೊರಡಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.
 
ಸಾಗಾಣಿಕೆ ದರದಲ್ಲಿನ ಹೆಚ್ಚಳ ಮತ್ತು ಪರೀಕ್ಷಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಇತರೆ ಕಾರ್ಯಗಳಿಗೆ ಖರ್ಚು ವೆಚ್ಚ ಹೆಚ್ಚಾಗಿರುವುದನ್ನು ಮುಂದಿರಿಸಿಕೊಂಡಿರುವ ಸರ್ಕಾರವು 2021-22ನೇ ಸಾಲಿಗೆ ಪ್ರತಿ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕವನ್ನು 25 ರು.ನಿಂದ 60 ರು.ಗೆ ಹೆಚ್ಚಿಸಿ ಶುಲ್ಕ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ. 2022ರ ಫೆಬ್ರುವರಿ ಮೊದಲನೇ ವಾರದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಿದೆ. ಪೂರ್ವ ಸಿದ್ಧತಾ ಮತ್ತು ಮುಖ್ಯ ಪರೀಕ್ಷಾ ಶುಲ್ಕವನ್ನೂ ವಿದ್ಯಾರ್ಥಿಗಳಿಂದ ಒಟ್ಟಿಗೇ ಪಡೆಯಲು ಸರ್ಕಾರವು ಅನುಮೋದಿಸಿದೆ.
 
2019ರ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ನಡೆಸಿದ್ದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷಾ ಶುಲ್ಕವನ್ನು 25 ರು.ಗೆ ನಿಗದಿಪಡಿಸಲಾಗಿತ್ತು. 2020-21ನೇ ಸಾಲಿನಲ್ಲಿ ಎರಡನೇ ಅಲೆಯು ರಾಜ್ಯಾದ್ಯಂತ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿರಲಿಲ್ಲ. ಇದೀಗ 2021-22ನೇ ಸಾಲಿಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷಾ ಶುಲ್ಕವನ್ನು ಪ್ರತಿ ವಿದ್ಯಾರ್ಥಿಗೆ 25 ರು.ಗಳಿಂದ 60 ರು. ಗೆ ಹೆಚ್ಚಳ ಮಾಡಿದೆ.
 
2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ 2021ರ ಆಗಸ್ಟ್‌ 23ರಿಂದ ಭೌತಿಕವಾಗಿ ತರಗತಿ ಆರಂಭವಾಗಿವೆ. ಶಾಲೆಗಳು ಭೌತಿಕವಾಗಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರುವುದರಿಂದ 2021-22ನೇ ಸಾಲಿಗೆ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷಾ ಪದ್ಧತಿ, ಪ್ರಶ್ನೆ ಪತ್ರಿಕೆ ವಿನ್ಯಾಸ, ಪೂರ್ವ ಸಿದ್ಧತಾ ಪರೀಕ್ಷೆ ವಿಧಾನ, ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕೃತಿ ಹಾಗೂ ಪರೀಕ್ಷಾ ಖರ್ಚು ವೆಚ್ಚಗಳ ಕುರಿತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷೆ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
 
‘ಪ್ರಸ್ತುತ ಸಾಗಾಣಿಕೆ ದರದಲ್ಲಿನ ಹೆಚ್ಚಳ ಮತ್ತು ಪರೀಕ್ಷಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಇತರೆ ಕಾರ್ಯಗಳಿಗೆ ಖರ್ಚು ವೆಚ್ಚ ಹೆಚ್ಚಾಗಿರುವುದನ್ನು ಮುಂದಿರಿಸಿಕೊಂಡಿರುವ ಸರ್ಕಾರವು 2021-22ನೇ ಸಾಲಿಗೆ ಪ್ರತಿ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕವನ್ನು 25 ರು.ನಿಂದ 60 ರು.ಗೆ ಹೆಚ್ಚಿಸುವುದು ಸೂಕ್ತ,’ ಎಂದು ಮಂಡಳಿಯು ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ