ಬೆಂಗಳೂರು: ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರು ತಮ್ಮದೇ ಪಕ್ಷದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಅಸಮಾಧಾನ ಹೊರಹಾಕಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ ಉಪಚನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಎಸ್ ಟಿ ಸೋಮಶೇಖರ್ ಅವರು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಸೋಮಶೇಖರ್ ಗೆ ತಾಕತ್ ಇದ್ದರೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ನಿಂದ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದರು.
ಇಂದು ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಎಸ್ ಟಿ ಸೋಮಶೇಖರ್ ಅವರು,``ನನ್ನ ತಾಕತ್ ಬಗ್ಗೆ ಅವಳು ಟೆಸ್ಟ್ ಮಾಡಬೇಕು ಅಂತಾದರೆ ಕ್ಷೇತ್ರಕ್ಕೆ ಬರಲಿ.. ಅವಳು ಸಂಸದೆ ಸ್ಥಾನಕ್ಕೆ ರಾಜೀನಾಮೆ ಕೊಡಲಿ, ನಾನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.
ಯಶವಂತಪುರದಲ್ಲಿ ಹೇಗೆ ಜಯ ಸಾಧಿಸಿದಲು ಗೊತ್ತಿಲ್ಲ. ಆಕೆಗೆ ತಾಕತ್ ಇದ್ದಲ್ಲಿ ಮತ್ತೇ ಯಶವಂತಪುರದಲ್ಲಿ ನಿಲ್ಲಲಿ.. ಅವಳದ್ದು ಪಾಪದ ಕೊಡ ಇನ್ನೂ ತುಂಬಬೇಕಾಗುತ್ತದೆ. ಪಾಪದ ಕೊಡ ತುಂಬುವವರೆಗೂ ನಾನೂ ತಾಳ್ಮೆಯಿಂದ ಕಾಯುತ್ತಿದ್ದೇನೆ. ಆಮೇಲೆ ನಾನು ಮಾತನಾಡುತ್ತೇನೆ, ನನಗೆ ಏನೂ ಮಾತು ಬರಲ್ಲ ಅಂತಾ ಅಲ್ಲ.. ಅವಳ ಹತ್ತರಷ್ಟು ನಾನು ಮಾತಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದರು.
ಆಕೆಗೆ ಚಿಕ್ಕಮಗಳೂರಿನಲ್ಲಿ ಉಗಿದ ರೀತಿ ನನಗೆ ನನ್ನ ಕ್ಷೇತ್ರದಲ್ಲಿ ಕ್ಯಾಕರಿಸಿ ಉಗಿದಿಲ್ಲ, ನನ್ನ ತಾಕತ್ ಬಗ್ಗೆ, ನನ್ನ ಬಗ್ಗೆ ಮಾತಾಡುವ ಕಿಂಚಿತ್ ಯೋಗ್ಯತೆ ಇಲ್ಲ ಈ ಯಮ್ಮನಿಗೆ.. ತಾಳ್ಮೆಯಿಂದ ಇದ್ದರೆ ಸರಿ, ಇಲ್ಲದಿದ್ದರೆ ಪಾಪದ ಕೊಡ ತುಂಬುತ್ತಿದೆ, ತುಂಬಿದ ಮೇಲೆ ಹೇಳುತ್ತೇನೆ ಎಂದರು.