ಭ್ರಷ್ಟರ ವಿರುದ್ಧ ಸಮರ ಸಾರುವ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ACB) ಸಿಬ್ಬಂದಿ ಕೊರತೆ ಎದುರಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಕೋರಿ ಪ್ರಸ್ತಾವನೆ ಸಲ್ಲಿಸಿ 9 ತಿಂಗಳಾಗಿದೆ.ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಒಲವು ತೋರಿಸಿಲ್ಲ.
ಬಿಡಿಎ, ಬಿಬಿಎಂಪಿ ಹಾಗೂ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಎಸಿಬಿ(Anti Corruption Bureau) ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದ ಅಧಿಕಾರಿಗಳಿಗೆ ಕಾರ್ಯದೊತ್ತಡ ಹೆಚ್ಚಾಗಿದೆ. ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಪರಿಣಾಮ ತ್ವರಿತಗತಿಯಲ್ಲಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ವಿಳಂಬವಾಗುತ್ತಿದೆ. ಸಮಸ್ಯೆಗೆ ಇತಿಶ್ರೀ ಹಾಡಲು ಹೆಚ್ಚಿನ ಸಂಖ್ಯೆಯಲ್ಲಿ 140 ಅಧಿಕಾರಿ/ ಸಿಬ್ಬಂದಿ ನೇಮಕಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದರೂ ರಾಜ್ಯ ಸರ್ಕಾರ ಕ್ಯಾರೆ ಅಂದಿಲ್ಲ. ಇದರಿಂದ ಅಧಿಕಾರಿ ವರ್ಗ ಒತ್ತಡದಲ್ಲಿಯೇ ಕಾರ್ಯನಿರ್ವಹಿಸಬೇಕಾಗಿದೆ.