ಕೇರಳದ ಕೊಚ್ಚಿ ಯಲ್ಲಿ ಇರುವ ಮಾಹಿತಿ ಮತ್ತು ತಂತ್ರ ಜ್ಞಾನ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ 'ಟೆಕ್ ಫೆಸ್ಟ್ 'ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಟೆಕ್ ಫೆಸ್ಟ್' ಅಂಗವಾಗಿ 1000-1500 ಆಸನ ಸಾಮರ್ಥ್ಯದ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ಅಯೋಜಿಸಲಾಗಿತ್ತು. ಸಭಾಂಗಣ ಭಾಗಶಃ ತುಂಬಿತ್ತು. ಆದರೆ ಈ ವೇಳೆ ಹಠಾತ್ತನೆ ಮಳೆ ಸುರಿದಿದ್ದರಿಂದ ನೆರೆದಿದ್ದ ವಿದ್ಯಾರ್ಥಿಗಳು ಆಶ್ರಯ ಅರಸಿ ಸಭಾಂಗಣದತ್ತ ಓಡಲಾರಂಭಿಸಿದರು. ಇದರಿಂದಾಗಿ ದುರಂತ ಸಂಭವಿಸಿತು' ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಂ.ಆರ್ ಅಜಿತ್ ಕುಮಾರ್ ತಿಳಿಸಿದರು. 'ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಕಲಮಕ್ಕೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ' ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.