ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕದಲ್ಲಿ ಮಳೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಹಲವು ಕಡೆ ರಾತ್ರಿ ಪೂರ್ತಿ ಜಿಟಿ ಜಿಟಿ ಮಳೆ ಸುರಿದ್ದು, ನಗರದ ಕೆಲ ರಸ್ತೆಯಲ್ಲಿ ಕೆಲ ಕಾಲ ನೀರು ನಿಂತಿತ್ತು. ಶಾಂತಿನಗರ, ಜಯನಗರ, ಕೆ.ಆರ್ ಪುರ, ಹಲಸೂರು, ಬನಶಂಕರಿ, ಮೆಜೆಸ್ಟಿಕ್ ಸೇರಿ ನಗರದ ಬಹುತೇಕ ಕಡೆ ಮಳೆಯಾಗಿದ್ದು, ಮೂರು ಗಂಟೆ ಸುಮಾರಿಗೆ ಸ್ವಲ್ಪ ಜೋರಾಗಿ ಮಳೆ ಸುರಿದಿದೆ. ಲಾಲ್ ಬಾಗ್ ವೆಸ್ಟ್ ಗೇಟ್ ಕಡೆಯಿಂದ ಸೌತೆ ಎಂಡ್ ಸರ್ಕಲ್ಗೆ ತೆರಳುವ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಸುಮಾರು ಐವತ್ತು ಮೀಟರ್ನಷ್ಟು ದೂರ, ಸುಮಾರು ಒಂದು ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತಿತ್ತು. ಒಳಚರಂಡಿ ಅವ್ಯವಸ್ಥೆಯ ಕಾರಣದಿಂದ ರಸ್ತೆ ಮೇಲೆ ನೀರು ಹರಿದಿದೆ. ಬಿಟಿಎಂ ಲೇಔಟ್ನ ಬಿಳೇಕಹಳ್ಳಿ ವಾರ್ಡ್ನ ಅನುಗ್ರಹ ಬಡವಾಣೆಯ ಮೊದಲನೇ ಹಂತದ ಎರಡು ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಒಂದು ಗಂಟೆ ಸತತವಾಗಿ ಮಳೆ ಸುರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತಿದೆ.