ರಾಜ್ಯ ಸರಕಾರ ರೈತರ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೇ ಪಲಾಯನ ಮಾಡುತ್ತಿದೆ. ಆದರೆ, ನ್ಯಾಯಯುತವಾಗಿ ಹೋರಾಟ ಮಾಡುವ ರೈತರನ್ನು ಬಂಧಿಸುವ ಮೂಲಕ ರೈತರ ಧ್ವನಿಯನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದ್ದು, 30 ಪ್ರತಿಶತ ಕಬ್ಬು ಬೆಳೆ ಕುಸಿದಿದೆ. ರೈತರಿಗೆ ಕನಿಷ್ಠ 3 ಸಾವಿರ ರೂಪಾಯಿ ಬೆಂಬಲ ಬೆಲೆಯನ್ನು ಅಧಿವೇಶನದಲ್ಲಿ ಘೋಷಣೆ ಮಾಡಲೇಬೇಕು ಎಂದು ಆಗ್ರಹಿಸಿದರು.
ಮಹದಾಯಿ ಹೋರಾಟದಲ್ಲಿ ಬಂಧನಕ್ಕೊಳಗಾದ ರೈತರ ಮೇಲಿನ ಪ್ರಕರಣವನ್ನು ರಾಜ್ಯ ಸರಕಾರ ಹಿಂಪಡೆಯುವಂತೆ ಸದನದಲ್ಲಿ ಒತ್ತಾಯಿಸಲಾಗುವುದು. ಒಂದು ವೇಳೆ, ರೈತರ ಮೇಲಿನ ಮೊಕದ್ದಮೆ ಹಿಂಪಡೆಯದೇ, ರೈತರ ಮೇಲಿನ ದೌರ್ಜನ್ಯ ಮುಂದುವರೆಸಿದರೆ ರಾಜ್ಯದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.