ಕಲ್ಲು ಕ್ವಾರಿ ಕುಸಿತ; 8 ಸಾವು
ಮಿಜೋರಾಂನಲ್ಲಿ ಸೋಮವಾರ ಕಲ್ಲು ಕ್ವಾರಿಯೊಂದು ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಬಳಿಕ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ, ಮಂಗಳವಾರ ಬಿಹಾರದ 8 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ 4 ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸೋಮವಾರ ಮಿಜೋರಾಂನ ಹ್ನಾಥಿಯಾಲ್ ಗ್ರಾಮದ ಬಳಿ ಇದ್ದ ಕಲ್ಲು ಕ್ವಾರಿ ಕುಸಿದು ಬಿದ್ದಿದೆ. ಇದರ ಪರಿಣಾಮ 12 ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರ ಗುರುತು ಪತ್ತೆಹಚ್ಚಲಾಗುತ್ತಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅವರ ಪತ್ತೆಯಾಗುವವರೆಗೂ ಶೋಧ ಮುಂದುವರಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ. ಮೂಲಗಳ ಪ್ರಕಾರ, ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ತಮ್ಮ ಊಟದ ವಿರಾಮದ ಬಳಿಕ ಕಲ್ಲು ಕ್ವಾರಿ ಬಳಿಗೆ ಮರಳಿದ್ದರು. ಈ ವೇಳೆ ಏಕಾಏಕಿ ಕಲ್ಲು ಕ್ವಾರಿ ಕುಸಿತಗೊಂಡಿದೆ. ಕಾರ್ಮಿಕರೊಂದಿಗೆ 5 ಹಿಟಾಚಿ ಅಗೆಯುವ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಮಣ್ಣಿನಡಿ ಹೂತುಹೋಗಿವೆ.