ಬೈರತಿ ಬಸವರಾಜು ವಿರುದ್ಧ ಪೊಲೀಸರೇ ಹೆಸರು ಸೇರಿಸಿಕೊಂಡಿದ್ದಾರೆ: ಆರ್ ಅಶೋಕ್

Krishnaveni K

ಶುಕ್ರವಾರ, 18 ಜುಲೈ 2025 (11:37 IST)
ಬೆಂಗಳೂರು: ರೌಡಿ ಶೀಟರ್ ಶಿವು ಬಿಕ್ಲು ಹತ್ಯೆಯಲ್ಲಿ ಕಾಂಗ್ರೆಸ್ ಸರ್ಕಾರದ ಪ್ರೇರಣೆಯಿಂದ ಪೊಲೀಸರೇ ಕೆಆರ್ ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜು ಹೆಸರು ಸೇರಿಸಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.

ರೌಡಿ ಶೀಟರ್ ಶಿವು ಬಿಕ್ಲು ಹತ್ಯೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜು ಅವರನ್ನು ಐದನೇ ಆರೋಪಿಯಾಗಿ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ, ಎರಡು ದಿನಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆಯೂ ನೋಟಿಸ್ ನೀಡಲಾಗಿದೆ. ಇದರ ಬಗ್ಗೆ ಆರ್ ಅಶೋಕ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

‘ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಅವನ ತಾಯಿ ವಿಜಯಲಕ್ಷ್ಮೀ ಅವರು "ನಾನು ಬೈರತಿ ಬಸವರಾಜ್ ವಿರುದ್ಧ ದೂರು ಕೊಟ್ಟಿಲ್ಲ, ಪೊಲೀಸರೇ ಹೆಸರು ಹಾಕಿಕೊಂಡಿದ್ದಾರೆ" ಎಂದು ಹೇಳಿರುವುದು ಕಾಂಗ್ರೆಸ್ ಸರ್ಕಾರ ಈ ಪ್ರಕರಣದಲ್ಲಿ ಯಾವ ಕೀಳು ಮಟ್ಟಕ್ಕೆ ಇಳಿದು ರಾಜಕೀಯ ದ್ವೇಷ ಸಾಧಿಸುತ್ತಿದೆ ಎನ್ನುವುದನ್ನ ಸಾಬೀತು ಪಡಿಸಿದೆ.

ಮಾತೆತ್ತಿದರೆ ಸಿಬಿಐ, ಐಟಿ, ಇಡಿ ಮೂಲಕ ಕೇಂದ್ರ ಸರ್ಕಾರ ವಿಪಕ್ಷಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅಪಪ್ರಚಾರ ಮಾಡುವ ಕಾಂಗ್ರೆಸ್ ನಾಯಕರು, ದೂರಿನಲ್ಲಿ ಶಾಸಕರ ಹೆಸರೇ ಇಲ್ಲದಿದ್ದರೂ ಅವರ ಮೇಲೆ ದುರುದ್ದೇಶದಿಂದ ಎಫ್ಐಆರ್ ಹಾಕಿರುವುದು ಯಾವ ಸೀಮೆ ನ್ಯಾಯ?

ಸುಳ್ಳು ಕೇಸುಗಳನ್ನು ಹಾಕುವ ಮೂಲಕ ಬಿಜೆಪಿ ಶಾಸಕರಿಗೆ ಬೆದರಿಕೆ ಹಾಕಬಹುದು ಎಂಬ ಭ್ರಮೆಯಿಂದ ಕಾಂಗ್ರೆಸ್ ಸರ್ಕಾರ ಹೊರಬರಬೇಕು. ಬಿಜೆಪಿ ಯಾವುದೇ ಅಪರಾಧಿಗಳನ್ನು ರಕ್ಷಿಸುವುದಿಲ್ಲ. ಆರೋಪ ಇದ್ದರೆ ಕಾನೂನಿನ ಪ್ರಕಾರ ತನಿಖೆ ಮಾಡಲಿ. ನ್ಯಾಯಾಲಯದಲ್ಲಿ ಸಾಬೀತು ಮಾಡಲಿ. ಅದು ಬಿಟ್ಟು ಈ ರೀತಿ ದ್ವೇಷ ರಾಜಕಾರಣ ಮಾಡಿ ವಿಪಕ್ಷ ಶಾಸಕರನ್ನು ಟಾರ್ಗೆಟ್ ಮಾಡಿದರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ