ಹಾಸ್ಟೆಲ್ ದುಸ್ಥಿತಿಗೆ ವಿದ್ಯಾರ್ಥಿನಿಯರು ಕಂಗಾಲು
ಮೈಸೂರು ವಿವಿಯ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಮೂಲ ಸೌಕರ್ಯವಿಲ್ಲದೆ ವಿದ್ಯಾರ್ಥಿನಿಯರು ಪರದಾಡುವಂತಹ ಸ್ಥಿತಿ ಎದುರಾಗಿದೆ. ಮಳೆ ಬಂದರೆ ಸಾಕು ಮಳೆ ನೀರಿನ ನಡುವೆ ಸಂಶೋಧನಾ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸ ಬೇಕಾಗಿದೆ. ಮಳೆ ನೀರಿನ ನಡುವೆ ವಿದ್ಯಾಭ್ಯಾಸ ಮಾಡಿ, ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ..ಇದು ಮೈಸೂರು ವಿವಿಯ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯದ ದುಸ್ಥಿತಿ. ಮಾನಸಗಂಗೋತ್ರಿಯ ಆವರಣದಲ್ಲಿರುವ ಬ್ಲಾಕ್ 1 ಕಟ್ಟಡ ಹಾಸ್ಟೆಲ್ನಲ್ಲಿ ಕಳಪೆ ಗುಣಮಟ್ಟದ ಆಹಾರ ಕೊಡ್ತಾರೆ, ಕುಡಿಯುವ ನೀರಿಲ್ಲ, ಕರೆಂಟ್ ಇಲ್ಲ ನಮ್ಮ ಕಷ್ಟ ಕೇಳೋಕೆ ಯಾರು ಬರ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ. ನಿರಂತರ ಮಳೆಯಿಂದ ಕಟ್ಟಡದ ಮೇಲ್ಛಾವಣಿ ಸೋರುತ್ತಿದೆ. ಮಳೆ ನಿಲ್ಲುವ ತನಕ ಕಾದು ಕುಳಿತು ಕೊಠಡಿಯಲ್ಲಿ ನಿಲ್ಲುವ ನೀರನ್ನು ಹೊರ ಹಾಕಿ ಮಲಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಶಿಥಿಲವಾದ ಹಾಸ್ಟೆಲ್ ಕಟ್ಟಡ ನಿರ್ವಹಣೆ ಮಾಡುವಂತೆ ಒತ್ತಾಯಿಸಿದ್ದಾರೆ.