ಮಂಡ್ಯ ಸಮಾವೇಶದಲ್ಲಿ ಸುಮಲತಾ ಬಿಜೆಪಿ ಸೇರ್ಪಡೆ?
ಮುಂಬರುವ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಆಪರೇಷನ್ ಕಮಲ ಆರಂಭಿಸುವ ಮೂಲಕ ಬಿಜೆಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
ಈಗಾಗಲೇ ವರ್ತೂರು ಪ್ರಕಾಶ್, ಪ್ರಮೋದ್ ಮಧ್ವರಾಜ್, ಲಕ್ಷ್ಮೀ ಅಶ್ವಿನಿ ಗೌಡ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೆಳೆದುಕೊಂಡಿದ್ದ ಬಿಜೆಪಿ ಇದೀಗ ಸುಮಲತಾ ಅಂಬರೀಶ್ ಅವರನ್ನು ಕರೆತರಲು ಪ್ರಯತ್ನಗಳು ನಡೆಸಿದೆ.
ಮಂಡ್ಯದ ಬಿಜೆಪಿ ಉಸ್ತುವಾರಿ ವಹಿಸಿರುವ ಆರ್.ಅಶೋಕ್ ಸ್ಥಳೀಯ ಮುಖಂಡರನ್ನು ಸೆಳೆಯಲು ಪ್ರಯತ್ನಗಳು ನಡೆಸಿದ್ದಾರೆ. ಸ್ಥಳೀಯ ಜೆಡಿಎಸ್ ಭದ್ರಕೋಟೆಯನ್ನು ಭೇದಿಸಿ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಅಂಬರೀಶ್ ಅವರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ.
ಈಗಾಗಲೇ ಸುಮಲತಾ ಅವರ ಜೊತೆ ಹಲವು ಸುತ್ತುಗಳು ಮಾತುಕತೆ ನಡೆದಿದ್ದು, ಪುತ್ರ ಅಭಿಷೇಕ್ ಗೆ ಮದ್ದೂರಿನಲ್ಲಿ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಅಲ್ಲದೇ ಸುಮಲತಾ ಮುಂದಿಟ್ಟಿರುವ ಹಲವು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿದೆ.
ಆದರೆ ಸುಮಲತಾ ಪಕ್ಷಕ್ಕೆ ಸೇರ್ಪಡೆ ಆಗುವ ಮುನ್ನವೇ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದಿದ್ದು ರಾಷ್ಟ್ರೀಯ ನಾಯಕರು ಮಂಡ್ಯಕ್ಕೆ ಭೇಟಿ ನೀಡಿದಾಗ ಅವರ ಜೊತೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ಇದೇ ವೇಳೆ ಸುಮಲತಾ ಮಂಡ್ಯದಲ್ಲಿ ಆಯೋಜಿಸಲಾಗುತ್ತಿರುವ ಬಿಜೆಪಿ ಸಮಾವೇಶದಲ್ಲಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಂಡ್ಯದಲ್ಲಿ ನಾರಾಯಣ ಗೌಡ ಅವರನ್ನು ಸೆಳೆದುಕೊಂಡ ನಂತರ ಉಪ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿ ಖಾತೆ ತೆರೆದ ಬಿಜೆಪಿ ಈ ಬಾರಿ ಕನಿಷ್ಠ ೩ರಿಂದ ೪ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಮತ್ತು ಅವರ ಬಳಗವನ್ನು ಸೆಳೆಯಲು ಪ್ರಯತ್ನಗಳು ನಡೆದಿದೆ.