ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಆಯೋಗ ರಚನೆ: ಸಿಎಂ

ಮಂಗಳವಾರ, 10 ಮೇ 2022 (07:47 IST)
ಬೆಂಗಳೂರು : ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲು ನ್ಯಾಯಮೂರ್ತಿ ಭಕ್ತವತ್ಸಲ ಅವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಆಯೋಗ ರಚಿಸಲಾಗಿದೆ.

ಈ ಮೂಲಕ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ದಯಾನಂದಪುರಿ ಸ್ವಾಮೀಜಿ ಅವರ 33ನೇ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ ಜನಜಾಗೃತಿ ಸಮಾವೇಶವನ್ನುದ್ದೇಶಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರತ್ಯೇಕ ಆಯೋಗ ರಚಿಸಲಾಗಿದೆ.

ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಅಂಶಗಳ ಆಧಾರದ ಮೇಲೆ ಸಮುದಾಯದ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. 

ಸಮಾಜದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಆ ಸಮುದಾಯ ವಿಕಾಸಗೊಳ್ಳುತ್ತದೆ. ಅದಕ್ಕಾಗಿಯೇ ನೇಕಾರ ಸಮ್ಮಾನ ಯೋಜನೆಯಡಿ ನೀಡಲಾಗುವ ಆರ್ಥಿಕ ನೆರವನ್ನು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಸಹಕಾರ ಬ್ಯಾಂಕ್ ಹಾಗೂ ಶೆಡ್ಯೂಲ್ ಬ್ಯಾಂಕಿನಲ್ಲಿ ಪಡೆಯುವ ಸಾಲದ ಬಡ್ಡಿದರವನ್ನು ಶೇ.8 ರಿಂದ ಶೇ.2-3ಕ್ಕೆ ಇಳಿಸಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ