ಸಂಸದೆ ಸುಮಲತಾ ಇಲ್ಲಿಗೆ ಬರಲೇಬೇಕಂತೆ: ಕಾರಣ?

ಶನಿವಾರ, 27 ಜುಲೈ 2019 (19:28 IST)
ಸಂಸದೆ ಸುಮಲತಾ ಅಂಬರೀಶ್ ಕೆ.ಆರ್.ಪೇಟೆಗೆ ಬರಬೇಕು. ಹೀಗಂತ ರೈತ ಮುಖಂಡರು ಆಗ್ರಹ ಮಾಡಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೆ.ಆರ್.ಪೇಟೆಗೆ ಆಗಮಿಸಬೇಕು. ಇಲ್ಲಿ ನಡೆಯುತ್ತಿರೋ ರೈತರ ಹೋರಾಟಕ್ಕೆ ಧ್ವನಿಯಾಗಿ ಹೇಮಾವತಿ ನದಿ ಕಾಲುವೆಗಳಿಗೆ ನೀರನ್ನು ಹರಿಸಲು ಸಹಾಯ ಮಾಡಬೇಕು. ಹೀಗಂತ ರೈತ ಮುಖಂಡ ಲಕ್ಷ್ಮೀಪುರ ಜಗದೀಶ್ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಗೊರೂರು ಜಲಾಶಯದಿಂದ ಹೇಮಾವತಿ ನದಿಗೆ ನೀರನ್ನು ಹರಿಸಿ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 30 ಸಾವಿರ ಎಕರೆ ಭೂ ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗಳನ್ನು ಉಳಿಸಬೇಕು. ಕೆರೆ-ಕಟ್ಟೆಗಳಿಗೆ ನೀರು ಹರಿಸಿ ಪಶುಪಕ್ಷಿಗಳು ಹಾಗೂ ಜನಸಾಮಾನ್ಯರಿಗೆ ಕುಡಿಯುವ ನೀರನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕು. ಹೀಗಂತ ಆಗ್ರಹಿಸಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ನೇತೃತ್ವದಲ್ಲಿ ನೂರಾರು 

ರೈತಮುಖಂಡರು ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಮುತ್ತಿಗೆ ಹಾಕಿ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ನಿಂಗಪ್ಪ ಅವರಿಗೆ ದಿಗ್ಭಂದನ ವಿಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು, ಕೆ.ಆರ್.ಎಸ್ ಜಲಾಶಯದಿಂದ ನೀರನ್ನು ಹರಿಸಿರುವ ಅಧಿಕಾರಿಗಳು ಹೇಮಾವತಿ ನದಿ ಅಣೆಕಟ್ಟೆಯಾದ ಗೊರೂರು ಜಲಾಶಯದಿಂದ ಏಕೆ ನೀರನ್ನು ಹರಿಸಲಿಲ್ಲ? ರೈತರಲ್ಲಿಯೇ ತಾರತಮ್ಯ ಮಾಡುತ್ತಿದ್ದೀರಾ? ಕೆ.ಆರ್.ಪೇಟೆ ತಾಲ್ಲೂಕಿನ ರೈತರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿದ್ದೀರಾ? ನಾಳೆ ಸಂಜೆಯೊಳಗೆ ನೀರು ಹರಿಸಬೇಕು ಎಂದರು.  ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ