ಬೆಂಬಲ ಬೆಲೆಯಲ್ಲಿ ಉದ್ದಿನಕಾಳು ಖರೀದಿ: 15 ಖರೀದಿ ಕೇಂದ್ರಗಳ ಸ್ಥಾಪನೆ
ಶನಿವಾರ, 10 ನವೆಂಬರ್ 2018 (14:06 IST)
ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉದ್ದಿನಕಾಳು ಖರೀದಿಗಾಗಿ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 15 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಪ್ರತಿ ಎಕರೆಗೆ 3 ಕ್ವಿಂಟಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 6 ಕ್ವಿಂಟಲ್ ಖರೀದಿ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಉದ್ದಿನಕಾಳು ಪ್ರತಿ ಕ್ವಿಂಟಲ್‍ಗೆ ರೂ.5600 ದರದಂತೆ ತಮ್ಮ ಗ್ರಾಮದ ಹತ್ತಿರದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಕಲಬುರಗಿ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ವೆಂಕಟೇಶಕುಮಾರ ತಿಳಿಸಿದ್ದಾರೆ.
ರೈತರು ಖರೀದಿ ಕೇಂದ್ರಗಳಲ್ಲಿ ತಮ್ಮ ಹೊಲದ ಪಹಣಿ ಪತ್ರ, ಬೆಳೆ ದೃಢೀಕರಣ ಪತ್ರ, ಆಧಾರ ಕಾರ್ಡ್ ಹಾಗೂ ಆಧಾರ ಕಾರ್ಡ ಜೋಡಣೆಯಾದ ಬ್ಯಾಂಕ್ ಖಾತೆ ಹೊಂದಿರುವ ಪಾಸ್‍ಬುಕ್ ಪುಸ್ತಕದ ಜಿರಾಕ್ಸ್ ಪ್ರತಿಯನ್ನು ದೃಢೀಕರಿಸಿ ಸಲ್ಲಿಸಿ 2018ರ ನವೆಂಬರ್ 16 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ದಿನಕಾಳು ಖರೀದಿ ಪ್ರಕ್ರಿಯೆಯು 2018ರ ಡಿಸೆಂಬರ್ 6 ರವರೆಗೆ ಮಾತ್ರ ಇದ್ದು, ಸರ್ಕಾರವು ಅವಧಿ ವಿಸ್ತರಿಸಿದ್ದಲ್ಲಿ ತಿಳಿಸಲಾಗುತ್ತದೆ.
ರೈತರು ಉದ್ದಿನಕಾಳು ಉತ್ಪನ್ನ ಖರೀದಿ ಕೇಂದ್ರಕ್ಕೆ ತಂದು ತಮ್ಮ ಉಪಸ್ಥಿತಿಯಲ್ಲಿಯೇ ಉದ್ದಿನಕಾಳು ತೂಕ ಮಾಡಿಸಿಕೊಳ್ಳಬೇಕು ಹಾಗೂ ಅಧಿಕೃತ ಗಣಕೀಕೃತ ರಸೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಖರೀದಿ ಕೇಂದ್ರದಲ್ಲಿ ಯಾವುದೇ ಹಣ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಉದ್ದಿನಕಾಳು ಉತ್ಪನ್ನ ಮಾರಾಟದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ (ಡಿ.ಬಿ.ಟಿ.) ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
ರೈತ ಬಾಂಧವರು ಉದ್ದಿನಕಾಳು ಉತ್ಪನ್ನದ ಖಾಲಿ ತೂಕ ಹೊರತುಪಡಿಸಿ 50 ಕೆ.ಜಿ. ಮಾತ್ರ ಒಳಗೊಂಡಿರುವುದನ್ನು ದೃಢೀಕರಿಸಿಕೊಳ್ಳಬೇಕು. ಹೆಚ್ಚುವರಿ ಪ್ರಮಾಣದಲ್ಲಿ ತೂಕ ಮಾಡಿದಲ್ಲಿ ಸಂಬಂಧಪಟ್ಟ ಆಯಾ ತಾಲೂಕಿನ ತಾಲೂಕು ನೋಡಲ್ ಅಧಿಕಾರಿಗಳ ಗಮನಕ್ಕೆ ತರಬೇಕು. ಉದ್ದಿನಕಾಳು ಖರೀದಿ ಕೇಂದ್ರದ ಬಗ್ಗೆ ಮಾಹಿತಿ ಹಾಗೂ ದೂರು ಸಲ್ಲಿಸಲು ಸಹಾಯವಾಣಿ ಸಂಖ್ಯೆ 08472-220610ಗೆ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದಿದ್ದಾರೆ.