ಕರ್ನಾಟಕಕ್ಕೆ ಮತ್ತೆ ಆಘಾತ: ಎರಡು ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಆದೇಶ

ಮಂಗಳವಾರ, 27 ಸೆಪ್ಟಂಬರ್ 2016 (15:13 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಗಾಯದ ಮೇಲೆ ಮತ್ತೆ ಸುಪ್ರೀಂಕೋರ್ಟ್ ಬರೆ ಎಳೆದಿದೆ. ಕಾವೇರಿ ನದಿಯಿಂದ ನಾಳೆ ಹಾಗೂ ನಾಡಿದ್ದು 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. 
ವಿಧಾನಸೌಧದಲ್ಲಿ ತೆಗೆದುಕೊಂಡ ನಿರ್ಣಯ ಸುಪ್ರೀಂಕೋರ್ಟ್‌ಗೆ ಅವಿಧೇಯತೆ ತೋರಿದಂತೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್, ಎರಡು ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕೋರ್ಟ್ ಆದೇಶಿಸಿದೆ. 
 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಅಧಿಕಾರಿಗಳ ಸಭೆ ನಡೆಸುವಂತೆ ಅಟಾರ್ನಿ ಜನರಲ್ ಅವರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
 
ಉಭಯ ರಾಜ್ಯಗಳ ಅಧಿಕಾರಿಗಳು ಪರಸ್ಪರ ಚರ್ಚಿಸಿ ಒಂದು ನಿರ್ಣಯಕ್ಕೆ ಬನ್ನಿ, ಶುಕ್ರವಾರ ಮಧ್ಯಾಹ್ನ ಮತ್ತೆ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
 
ತಮಿಳುನಾಡಿಗೆ ನೀರು ಬಿಡುವಂತೆ ಹೊರಡಿಸಿದ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಸೆಪ್ಟೆಂಬರ್ 26ರಂದು ರಾಜ್ಯ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. 
 
ಕರ್ನಾಟಕ ಸರಕಾರ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸದ ಸುಪ್ರೀಂಕೋರ್ಟ್, ಕಾವೇರಿ ನದಿಯಿಂದ ನಾಳೆ ಹಾಗೂ ನಾಡಿದ್ದು ಒಟ್ಟು 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠ ಆದೇಶ ಹೊರಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ