ಗುಂಡ್ಲುಪೇಟೆ ಕಾರ್ಯಕರ್ತನ ಮನೆಗೆ ಸುರೇಶ್ ಕುಮಾರ್ ಭೇಟಿ; ಸಾಂತ್ವನ

ಬುಧವಾರ, 28 ಜುಲೈ 2021 (19:07 IST)
ಬೆಂಗಳೂರು:  ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರ ರಾಜಿನಾಮೆ   ಸುದ್ದಿ ಕೇಳಿ ಮಾನಸಿಕವಾಗಿ ನೊಂದು  ಆತ್ಮಹತ್ಯೆ ಮಾಡಿಕೊಂಡ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರಾಜಪ್ಪ (ರವಿ)ಯವರ ಮನೆಗೆ ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವ್ವನ ಹೇಳಿದರು. 
 
ಚಾಮರಾಜನಗರ ಜಿಲ್ಲೆಯ ನಿಕಟಪೂರ್ವ ಉಸ್ತುವಾರಿ ಸಚಿವರೂ ಆದ ಸುರೇಶ್ ಕುಮಾರ್,  ಬುಧವಾರ ಮೃತನ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ರವಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಟ್ಟಾ ಅಭಿಮಾನಿಯಾಗಿದ್ದರು. ಹಿಂದಿನ ದಿನ ರಾಜೀನಾಮೆ‌ ಸುದ್ದಿ ಕೇಳಿ ವಿಚಲಿತರಾಗಿದ್ದರೆಂದು ಅವರ ಕುಟುಂಬಸ್ಥರಿಂದ ಅರಿತಿದ್ದೇನೆ. ಯಡಿಯೂರಪ್ಪನವರ ರಾಜಿನಾಮೆಯನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಿಪರೀತ ಕೃತ್ಯಕ್ಕೆ  ಅವರು ಮುಂದಾಗಬಾರದಾಗಿತ್ತು. ಅವರ ಕುಟುಂಬವನ್ನು  ಅವರು ಅನಾಥರನ್ನಾಗಿಸಿ  ಪೋಷಕರು ಮತ್ತು ಕುಟಂಬದ ಸದಸ್ಯರನ್ನು ತೀವ್ರ ಸಂಕಷ್ಟಕ್ಕೆ ಈಡು ಮಾಡುವ ನಿರ್ಧಾರವನ್ನು ಅವರು ತೆಗೆದುಕೊಳ್ಳಬಾರದಿತ್ತೆಂದು ವಿಷಾದ ವ್ಯಕ್ತಪಡಿಸಿದರು. 
 
ಸುರೇಶ್ ಕುಮಾರ್ ಅವರು ಇಂದು ನೂತನ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ರಾಜಭವನದಿಂದ ನೇರವಾಗಿ ಬೊಮ್ಮಾಲಪುರಕ್ಕೆ ಆಗಮಿಸಿದರು.  ಮೃತ ರವಿಯವರ ಮನೆಗೆ ಭೇಟಿ ನೀಡಿ ಅವರ ತಾಯಿಯೊಂದಿಗೆ ಕುಳಿತು ಸುದೀರ್ಘವಾಗಿ ಮಾತನಾಡಿದರು. 
 
ಯಾವುದೇ ಅಭಿಮಾನಿಗಳಾಗಿರಲಿ, ಪಕ್ಷದ ಕಾರ್ಯಕರ್ತರಾಗಿರಲಿ, ಯಾರೇ ಆಗಿರಲಿ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕಬಾರದು. ಜೀವನದಲ್ಲಿ ಇಂತಹ ಹಲವಾರು ಘಟನೆಗಳು, ಕಷ್ಟನಷ್ಟಗಳು  ಬರುತ್ತವೆ. ಎಲ್ಲವನ್ನೂ ಸಮಾಧಾನದಿಂದ ಎದುರಿಸಬೇಕೆಂದು ಅವರು ಹೇಳಿದರು. 
 
ರವಿಯವರು ತಮ್ಮ ರಾಜಿನಾಮೆ ಸುದ್ದಿ ಕೇಳಿ ಆತ್ಮಹತ್ಯೆಗೆ ಮುಂದಾಗಿದ್ದನ್ನು ತಿಳಿದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೂ ಸಹ ತೀವ್ರ ನೊಂದುಕೊಂಡಿದ್ದಾರೆಂದು ಸುರೇಶ್  ಕುಮಾರ್ ಹೇಳಿದರು. 
 
ತಮ್ಮ ಅಭಿಮಾನಿ ಆತ್ಮಹತ್ಯೆ ರವಿಯವರ ಆತ್ಮಹತ್ಯೆ ಸುದ್ದಿ ತಿಳಿದ ಬಿ.ಎಸ್. ಯಡಿಯೂರಪ್ಪನವರೂ ಸಹ ಸೋಮವಾರವೇ ಮೃತನ ಪೋಷಕರೊಂದಿಗೆ ದೂರವಾಣಿ ಮೂಲಕವೇ ಮಾತನಾಡಿ ಸಾಂತ್ವನ  ಹೇಳಿದ್ದರು. ಹಾಗೆಯೇ ಯಾವುದೇ ಕಾರ್ಯಕರ್ತ, ಅಭಿಮಾನಿಗಳು ಸಹ ಇಂತಹ ಕೃತ್ಯಕ್ಕೆ ಮುಂದಾಗಬಾರದೆಂದು ಹೇಳಿದ್ದರಲ್ಲದೇ ಅಭಿಮಾನ ಅತಿರೇಕಕ್ಕೆ ಹೋಗಬಾರದು ಎಂದು ಸಲಹೆ ನೀಡಿದ್ದರು.
 
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಶಾಸಕ ಸಿ.ಎಸ್.  ನಿರಂಜನ್ ಕುಮಾರ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ