ಡಿಕೆಶಿಗೆ ಬುದ್ಧಿಭ್ರಮಣೆಯಾಗಿದೆ ಎಂದ ಸ್ವಾಮೀಜಿ

ಶುಕ್ರವಾರ, 19 ಅಕ್ಟೋಬರ್ 2018 (20:26 IST)
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿಂದಿನ ಸರ್ಕಾರದಲ್ಲಿ ಶಿಫಾರಸ್ಸು ಮಾಡಿದ್ದು ತಪ್ಪಾಗಿದೆ ಎಂದು ಕ್ಷಮೆ ಕೇಳಿದ ಸಚಿವ ಡಿಕೆಶಿ ವಿರುದ್ಧ ಲಿಂಗಾಯತ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಚಿವ ಡಿ.ಕೆ.ಶಿವಕುಮಾರ ಗೆ ಬುದ್ದಿಭ್ರಮಣೆಯಾಗಿದೆ. ಡಿಕೆಶಿಗೆ ಅವನತಿ ಕಾಲ ಹತ್ತಿರ ಬಂದಿದೆ ಎಂದು ಸ್ವಾಮೀಜಿ ಟೀಕಿಸಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ತನಗೆ ಸಂಬಂಧವಿಲ್ಲದ ವಿಷಯದಲ್ಲಿ ವೈದಿಕ ಸ್ವಾಮೀಜಿಗಳ ಒತ್ತಡಕ್ಕೆ ಹೀಗೆ ಮಾತನಾಡುತ್ತಾರೆಂದರೆ ಅದು ಅವರ ಅವಿವೇಕಿತನ. ಡಿಕೆಶಿಗೆ ಅವನತಿ ಕಾಲ ಹತ್ತಿರ ಬಂದಿದೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಖಂಡ, ಶ್ರೀಶೈಲ ಸಾರಂಗಧರ ದೇಶಿಕೇಂದ್ರದ ಜಗದ್ಗುರು ಮಹಾಂತ ಶಿವಾಚಾರ್ಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಶ್ರೀಗಳು, ಡಿಕೆಶಿ ಹಲವು ಹಗರಣಗಳಲ್ಲಿ ಇದ್ದಾರೆ. ತನ್ನ ಹಗರಣಗಳನ್ನ ತಾನು ಮುಗಿಸಿಕೊಳ್ಳಲಿ ಹೊರತಾಗಿ ಮತ್ತೊಬ್ಬರ ವಿಚಾರದಲ್ಲಿ ಕೈ ಹಾಕುವದು ಅವಶ್ಯಕತೆ ಇಲ್ಲ. ತಕ್ಷಣ ಲಿಂಗಾಯತ ಸಮುದಾಯಕ್ಕೆ ಕ್ಷಮೆ ಕೇಳಲಿ ಎಂದು  ಆಗ್ರಹಿಸಿದರು. ಉತ್ತರ ಕರ್ನಾಟಕದಲ್ಲಿ 60 ಲಿಂಗಾಯತ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಒಕ್ಕಲಿಗ ಸಮುದಾಯದ ಡಿಕೆಶಿ ಎಷ್ಟು ಕಾಂಗ್ರೆಸ್‍ಗೆ ವೋಟು ತಂದಿದ್ದಾರೆ ಅರ್ಥಮಾಡಿಕೊಳ್ಳಲಿ. ಸಿಎಂ ಆಗಬೇಕೆಂಬ ದುರಾಸೆಯಲ್ಲಿ ಸ್ವಾಮಿಜಿಯೊಬ್ಬರನ್ನು ಒಲಿಸಿಕೊಳ್ಳಬೇಕೆಂದು ಡಿಕೆಶಿ ಈ ರೀತಿ ಹೇಳಿಕೆ ಕೊಟ್ಟಿರುವದು ಸರಿಯಲ್ಲ. ಯಾವ ಸರ್ಕಾರದ ಮೇಲೆ ನಾವು ಅವಲಂಬಿತರಾಗಿಲ್ಲ.

ಲಿಂಗಾಯತ ಧರ್ಮಕ್ಕೆ 900 ವರ್ಷಗಳ ಇತಿಹಾಸವಿದೆ. ಪ್ರತ್ಯೇಕ ಧರ್ಮಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ. ಸುಪ್ರೀಂ ಕೋರ್ಟ್‍ಗೆ ಹೋಗಿಯಾದ್ರೂ ಪ್ರತ್ಯೇಕ ಲಿಂಗಾಯತ ಧರ್ಮ ಪಡೆಯುತ್ತೇವೆ ಎಂದರು. ಕ್ಷಮೆ ಕೇಳದಿದ್ದರೆ ಉತ್ತರ ಕರ್ನಾಟಕಕ್ಕೆ ಬರದಂತೆ ಡಿಕೆಶಿಗೆ ಬಹಿಷ್ಕಾರ ಹಾಕುತ್ತೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ