ಒಡಿಶಾದ ಮಯೂರ್‌ಗಂಜ್ ಜಿಲ್ಲೆಯ ಉಪಾರ್‌ಬೆಡ ಎಂಬ ಹಳ್ಳಿಯಲ್ಲಿ 1958ರ ಜೂ. 20ರಂದು, ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸಂತಾಲಿ ಎಂಬ ಆದಿವಾಸಿಗಳ ಸಮುದಾಯದಲ್ಲಿ ಇವರು ಜನಿಸಿದರು. ಅವರ ತಂದೆ, ತಾತನವರು ಹಳ್ಳಿ ಪಂಚಾಯಿತಿಯ ಅಧ್ಯಕ್ಷರಾಗಿದ್ದವರು. ಬಾಲ್ಯದಲ್ಲಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಪ್ರಾಧ್ಯಾಪಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು.ಅವರ ಮನೆಯವರು, ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಶ್ಯಾಮ್ ಚರಣ್ ಮುರ್ಮು ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ, 2014ರಲ್ಲಿ ಶ್ಯಾಮ್ ಅವರು ನಿಧನ ಹೊಂದಿದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದು, ಗಂಡು ಮಕ್ಕಳಿಬ್ಬರೂ ಮೃತಪಟ್ಟಿದ್ದಾರೆ.
ಪ್ರಾಧ್ಯಾಪಕಿಯಾಗಿದ್ದ ಅವರು, ಒಡಿಶಾದ ರಾಯ್‌ರಂಗಾಪುರದಲ್ಲಿರುವ ಶ್ರೀ ಅರಬಿಂದೋ ಇಂಟಿಗ್ರಲ್ ಎಜುಕೇಶನ್ ಆಯಂಡ್ ರಿಸರ್ಚ್ ಇನ್ಸಿಟಿಟ್ಯೂಟ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಆನಂತರ, ಒಡಿಶಾ ಸರಕಾರದ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಅಸಿಸ್ಟಂಟ್ ಆಗಿಯೂ ಸೇವೆ ಸಲ್ಲಿಸಿದ್ದರು.
ರಾಜಕೀಯ ಜೀವನ
1997ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದ ಮುರ್ಮು, ರಾಯ್‌ರಂಗಾನಗರ ಪಂಚಾಯಿತಿಗೆ ಕೌನ್ಸಿಲರ್ ಆಗಿ ಅದೇ ವರ್ಷ ಆಯ್ಕೆಯಾಗಿದ್ದರು. 2000ನೇ ಇಸವಿಯಲ್ಲಿ ಅವರು ಅದೇ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಅದೇ ವರ್ಷ, ಬಿಜೆಪಿಯ ರಾಷ್ಟ್ರೀಯ ಎಸ್‌ಟಿ ಮೋರ್ಚಾಕ್ಕೆ ಉಪಾಧ್ಯಕ್ಷ ರಾಗಿ ನೇಮಕಗೊಂಡರಲ್ಲದೆ, ಆ ವರ್ಷ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ರಾಯ್‌ರಂಗಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾದರು. ಆಗ, ರಚನೆಯಾದ ಬಿಜೆಪಿ- ಬಿಜು ಜನತಾದಳ ಸಮ್ಮಿಶ್ರ ಸರಕಾರದಲ್ಲಿ ವಾಣಿಜ್ಯ ಇಲಾಖೆಯ ಸ್ವತಂತ್ರ ಸಚಿವೆಯಾಗಿ (2000-02), ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವರಾಗಿ (2002- 04)ಲ್ಲಿ ಸೇವೆ ಸಲ್ಲಿಸಿದ್ದರು. ಸಚಿವರಾಗಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಒಡಿಶಾ ಸರಕಾರ, ಶ್ರೇಷ್ಠ ಶಾಸಕರಿಗಾಗಿ ನೀಡಲಾಗುವ ನೀಲಕಂಠ ಪ್ರಶಸ್ತಿಯನ್ನು ಅವರಿಗೆ 2007ರಲ್ಲಿ ನೀಡಿ ಗೌರವಿಸಿತ್ತು.