ಮೀನು ಖರೀದಿಸದ ತೇಜಸ್ವಿಗೆ ಕೆರೆಯಲ್ಲೂ ಮೀನು ಸಿಗಲಿಲ್ಲ; ತೇಜಸ್ವಿ ಬದುಕು ಕುತೂಹಲ

ಶನಿವಾರ, 28 ಆಗಸ್ಟ್ 2021 (10:48 IST)
ಮೈಸೂರು: ಇವತ್ತೂ ಮತ್ತು ನಾಳೆ ನಮ್ಮೆನ್ನೆಲ್ಲಾ ಪ್ರಭಾವಿಸುವ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಕುತೂಹಲ ಮತ್ತು ವಿಸ್ಮಯ ಭರಿತವಾದದ್ದು ಎಂದು ವನ್ಯಜೀವಿ ತಜ್ಞ ಕೃಪಾಕರ ತಿಳಿಸಿದರು. ಮಹಾರಾಜ ಕಾಲೇಜಿನ ಕಾಜಾಣ ಬಳಗ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ತೇಜಸ್ವಿ-ಅನುಭವಲೋಕ ಕುರಿತ ಸಂವಾದದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡಿದರು.

ತೇಜಸ್ವಿ ಕೃತಿಗಳಲ್ಲಿ ಪಕೃತಿಯ ಬಗ್ಗೆ ವಿಸ್ಮಯ ಮಾಹಿತಿ ತುಂಬಿರುತ್ತದೆ. ಅವರ ಕೃತಿಗಳಲ್ಲಿ ಮಾಹಿತಿ, ಅನುಭವ ದಾಟಿಸುವ ರೀತಿ ಮತ್ತೂ ವಿಶಿಷ್ಟ. ಹಾರುವ ಓತಿ ಒಂದು ಮರದಿಂದ ಮತ್ತೂಂದು ಮರಕ್ಕೆ ಹಾರುವುದನ್ನು ಮಿಲಿಯಾಂತರ ವರ್ಷ ತೆಗೆದುಕೊಳ್ಳುತ್ತದೆ ಎಂಬುದನ್ನು 2 ಪದಗಳಲ್ಲೇ ವಿವರಿಸುತ್ತಾರೆ. ಅಲ್ಲಿ ಮಿಲಿಯಾಂತರ ವರ್ಷಗಳ ಬದುಕು ಕಟ್ಟಿಕೊಡುತ್ತಾರೆ. ತೇಜಸ್ವಿ ಜೀವನ ಸ್ಫೂರ್ತಿ ಅನನ್ಯವಾದದ್ದು ಎಂದರು.
ವನ್ಯಜೀವಿ ತಜ್ಞ ಸೇನಾನಿ ಮಾತನಾಡಿ, ಕುವೆಂಪು ಅವರ ಪೂರ್ಣದೃಷ್ಟಿ ಆಶಯದಲ್ಲಿ ಜಗತ್ತಿನ ಎಲ್ಲರೂ ಒಂದೇ ಕ್ರಿಮಿ ಕೀಟಗಳಲ್ಲಿಯೂ ಬೇಧವಿರಬಾರದು ಎಂಬುದಾಗಿತ್ತು. ಈ ಪೂರ್ಣದೃಷ್ಟಿಯನ್ನು ತೇಜಸ್ವಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಹಾಗಾಗಿ ಅವರ ಬದುಕು ಪೂರ್ಣತ್ವದಿಂದಲೇ ಕೂಡಿತ್ತು. ತೇಜಸ್ವಿ ಅವರಿಗೆ ಬಹಳ ಪುಸ್ತಕ ಪ್ರೀತಿಯಿತ್ತು.
ಹೊರಗಿನಿಂದ ಬರು ವವರ ಕಾಡಿಬೇಡಿ ಪುಸ್ತಕ ತರಿಸುತ್ತಿದ್ದರು. ಅದರಲ್ಲಿ ವನ್ಯಜೀವಿ, ಬೇಟೆ,ಫೋಟೋಗ್ರಫಿಕುರಿತಾದ ಪುಸ್ತಕಗಳೇ ಹೆಚ್ಚಿರುತ್ತಿದ್ದವು. ಅದೀಮ ಕುತೂಹಲದ ಜೀವಿ ತೇಜಸ್ವಿ. ನಮಗೆ ಗೊತ್ತಿಲ್ಲದಂತೆಯೇ ಅವರ ಪ್ರಭಾವ ಬೀರಿತ್ತು. ಜೀವ ಪರಿಸರದ ಬಗ್ಗೆ ಅಳವಾದ ಅನುಭವವಿತ್ತು. ಕೃಷ್ಣಗೌಡ ಆನೆ ಕಥೆಯಲ್ಲಿ ಆನೆ ಪಾತ್ರದ ಬಗ್ಗೆ ನಮ್ಮಿಂದ ಮಾಹಿತಿ ಪಡೆದಿದ್ದರು ಎಂದರು.
ಸಂವಾದದಲ್ಲಿ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್ ಅಧ್ಯಕ್ಷತೆ ವಹಿಸಿದ್ದರು. ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಉಪಸ್ಥಿತರಿದ್ದರು.
ಪಟ್ಟೆ ಹುಲಿ(ತೇಜಸ್ವಿ) ಇದ್ದಾಗ ಕಾಡು ಸಮೃದ್ಧವಾಗಿತ್ತು
ವನ್ಯಜೀವಿ ತಜ್ಞ ಸೇನಾನಿ ಮಾತನಾಡಿ, ತೇಜಸ್ವಿ ಅವರ ಕುರಿತಾದ ಸಾಕ್ಷ್ಯಚಿತ್ರ ಮಾಡುವಾಗ ಮೂಡಿಗೆರೆಯ ಸ್ಥಳೀಯರೊಬ್ಬರು ಇಲ್ಲೊಂದು ಪಟ್ಟೆ ಹುಲಿಯಿತ್ತು. ಆ ಹುಲಿ ಇದ್ದಾಗ ಮರಳು ಸಾಗಾಟ ಇರಲಿಲ್ಲ. ಕಾಡು ಸಮೃದ್ಧವಾಗಿತ್ತು ಎಂದು ತೇಜಸ್ವಿಯ ಅನುಪಸ್ಥಿತಿ ಬಗ್ಗೆ ಹೇಳಿ, ಇವತ್ತು ಸಾವಿರಾರು ಮರಗಳನ್ನು ಕಡಿಯುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಮೀತಿ ಮೀರಿದೆ. ತೇಜಸ್ವಿ ಹುಲಿಯಂತೆ ತಮ್ಮ ಲೋಕದಲ್ಲಿ ವಿಹರಿಸಿ ಪರೋಕ್ಷವಾಗಿ ಅರಣ್ಯ ಸಂರಕ್ಷಣೆಗೆ ಕಾರಣೀಕರ್ತರಾಗಿದ್ದರು ಎಂದು ತಿಳಿಸಿದರು.
ಮೀನು ಖರೀದಿಸದ ತೇಜಸ್ವಿಗೆ ಕೆರೆಯಲ್ಲೂ ಮೀನು ಸಿಗಲಿಲ್ಲ
ಒಮ್ಮೆ ತೇಜಸ್ವಿಯೊಂದಿಗೆ ಕರಾವಳಿ ಮೀನಿನ ಮಾರುಕಟ್ಟೆಗೆ ಭೇಟಿ ಕೊಟ್ಟ ಸಂದರ್ಭವನ್ನು ಹಂಚಿಕೊಂಡ ಕೃಪಾಕರ ಅವರು, ಮಾರಾಟಕ್ಕೆ ಬಂದ ಹಲವು ಬಗೆಯ ಮೀನು ನೋಡುವುದು ತೇಜಸ್ವಿ ಅವರ ಹವ್ಯಾಸ. ಆದರೆ ಮೀನು ಖರೀದಿಸದೆ ಮರಳಿ ಕೆರೆಯಲ್ಲಿ ಮೀನು ಹಿಡಿಯಲು ಕುಳಿತರು. ನಮ್ಮ ಆಹಾರವನ್ನು ನಾವೇ ಉತ್ಪತ್ತಿ ಮಾಡಿಕೊಳ್ಳಬೇಕೆಂದು ಅವರು ನಂಬಿದ್ದರು. ಮೀನು ಯಾರಾದರೂ ದುಡ್ಡು ಕೊಟ್ಟು ಖರೀದಿಸಬೇಕೆ? ಎಂದಿದ್ದರು. ಆದರೆ, ಅವತ್ತು ಮೀನು ಸಿಗಲಿಲ್ಲ ಎಂದು ನೆನಪುಗಳನ್ನು ಮೆಲುಕು ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ