ಚುನಾವಣೆ ಯಶಸ್ಸಿಗೆ ತೇಜಸ್ವಿನಿ ಅನಂತಕುಮಾರ್- ಸುತ್ತೂರು ಶ್ರೀ ಭೇಟಿ

ಭಾನುವಾರ, 17 ಮಾರ್ಚ್ 2019 (15:09 IST)
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿನಿ ಅನಂತಕುಮಾರ್ ಸ್ಪರ್ಧಿಸುವುದು ಖಚಿತಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಯಶಸ್ಸಿಗಾಗಿ ಸುತ್ತೂರು ಶ್ರೀಗಳಿಗೆ ಭೇಟಿ ಮಾಡಿ ಆಶೀರ್ವಾದ ಪಡೆದರು.

ಅನಂತಕುಮಾರ್ ಸಾವಿನ ನಂತರ ಅವರ ಪತ್ನಿಗೆ ಪಕ್ಷದ ಟಿಕೆಟ್ ನೀಡಬೇಕೆಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ತೇಜಸ್ವಿನಿ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು.

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಪತ್ನಿಯಾಗಿರುವ ತೇಜಸ್ವಿನಿ ಬೆಂಗಳೂರು ಮತಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಅದಮ್ಯ ಚೇತನಾ ಫೌಂಡೇಶನ್ ಮೂಲಕ ಕೆಳವರ್ಗದ ಬಡ ಮಕ್ಕಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಎಚ್.ಎನ್.ಅನಂತಕುಮಾರ್ ಅವರು 1996ರಿಂದ ಸತತವಾಗಿ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರ ಸಾವಿನ ನಂತರ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಅವರ ಸ್ಥಾನವನ್ನು ತುಂಬಲು ಅನಂತಕುಮಾರ್ ಅವರ ಕುಟುಂಬದವರನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿತ್ತು.

ತ್ಯಾಗರಾಜ್ ನಗರದ ಸುತ್ತೂರು ಸದನದಲ್ಲಿ ತೇಜಸ್ವಿನಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದು, ಶಾಸಕ ವಿ.ಸೋಮಣ್ಣ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇತರರಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ