ಇರಾನ್​ನ ಷಿಯಾ ಮಸೀದಿ ಮೇಲೆ ಉಗ್ರರ ದಾಳಿ

ಗುರುವಾರ, 27 ಅಕ್ಟೋಬರ್ 2022 (19:21 IST)
ಇರಾನ್​ನಲ್ಲಿ ಹಿಜಾಬ್ ವಿರೋಧಿ ಹೋರಾಟಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಷಿಯಾ ಮುಸ್ಲಿಂ ಸಮುದಾಯದ ಪ್ರಮುಖ ಯಾತ್ರಾ ಸ್ಥಳ ‘ಷಾ ಚೆರಾಗ್’ ಮಸೀದಿಯ ಮೇಲೆ ಭೀಕರ ಭಯೋತ್ಪಾದನಾ ದಾಳಿ ನಡೆದಿದೆ. ಅಪರಿಚಿತ ಬಂದೂಕುಧಾರಿ ಅಡ್ಡಾದಿಡ್ಡಿ ಗುಂಡು ಹಾರಿಸಿದಾಗ 15 ಮಂದಿ ಸ್ಥಳದಲ್ಲಿಯೇ ಮೃತಪಟ್ಟರು. ‘ಷಾ ಚೆರಾಗ್’ ಮಸೀದಿಯಲ್ಲಿ ಷಿಯಾ ಸಮುದಾಯದ 8ನೇ ಧರ್ಮಗುರು ಇಮಾಮ್ ರೆಜಾ ಅವರ ಸಮಾಧಿ ಇದೆ. ಇದು ದಕ್ಷಿಣ ಇರಾನ್​ನ ಪವಿತ್ರ ಯಾತ್ರಾಸ್ಥಳ ಎಂದು ಹೆಸರುವಾಸಿಯಾಗಿದೆ. ಈ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ. ಮಸೀದಿಗೆ ನುಗ್ಗಿದ ಅಪರಿಚಿತರು ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಏಕಾಏಕಿ ಅಡ್ಡಾದಿಡ್ಡಿ ಗುಂಡು ಹಾರಿಸಲು ಆರಂಭಿಸಿದರು. ಕೆಲ ಹೊತ್ತಿನ ನಂತರ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಭಾಗವಾಗಿ ಗುರುತಿಸಿಕೊಂಡಿರುವ ಗುಂಪೊಂದು ದಾಳಿಯ ಹೊಣೆ ಹೊತ್ತುಕೊಂಡಿತು. ಭಯೋತ್ಪಾದಕ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ದಾಳಿ ಮಾಡಿದವರು ಯಾರೇ ಆಗಿದ್ದರೂ ಬಿಡುವುದಿಲ್ಲ. ಅವರನ್ನು ಪತ್ತೆ ಹಚ್ಚಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ದೇಶವನ್ನು ವಿಭಜಿಸಲು ಯತ್ನಿಸುತ್ತಿರುವ ಇರಾನ್ ವಿರೋಧಿಗಳನ್ನು ಸಹಿಸಲು ಆಗುವುದಿಲ್ಲ ಎಂದು ಕಟುವಾಗಿ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ