ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ ಘೋಷಣೆಯಡಿ ಸಹಿಸಂಗ್ರಹ ಆರಂಭಿಸಿದ ಬಿಜೆಪಿ

Sampriya

ಭಾನುವಾರ, 2 ನವೆಂಬರ್ 2025 (13:00 IST)
Photo Credit X
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಟನಲ್ ಯೋಜನೆ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ. ಈ ಸಂಬಂಧ ಬಿಜೆಪಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.

ವಿಪಕ್ಷ ನಾಯಕ ಅಶೋಕ್, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ ಘೋಷಣೆ ಅಡಿಯಲ್ಲಿ ಸಹಿ ಸಂಗ್ರಹ ಅಭಿಯಾನ ಶುರುವಾಗಿದೆ.

ಲಾಲ್‌ಬಾಗ್ ಗುಡ್ಡದ ಮೇಲೆ ಜನರ ಜೊತೆ ಬಿಜೆಪಿ ನಾಯಕರು ಕುಳಿತ ಅಭಿಯಾನ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಅಶೋಕ್ ಟನಲ್ ರೋಡ್ ಮಾರ್ಗದ ಬಗ್ಗೆ ಜಂಟಿ ನಿರ್ದೇಶಕ ಜಗದೀಶ್ ಬಳಿ ಮಾಹಿತಿ ಕೇಳಿ ಪಡೆದಿದ್ದಾರೆ. ಅಲ್ಲದೇ ಜಿಬಿಎಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಜೊತೆ ಚರ್ಚೆ ನಡೆಸಿದರು.

ಬೆಂಗಳೂರಿನ ಪರಿಸರ ಪ್ರೇಮಿಗಳ, ಇತಿಹಾಸ ಇರುವ, ಬೆಂಗಳೂರಿನ ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಇದಕ್ಕೆ ವಿರೋಧವಾಗಿ ಬಿಜೆಪಿಯವರು ಸೇರಿದ್ದೇವೆ. ಸುರಂಗ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತದೆ. ಬೆಂಗಳೂರಿನ ಜನರು ನಿದ್ದೆಗೆಡುವ ಹಾಗಾಗಿದೆ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಈ ಸುರಂಗ ರಸ್ತೆಯು ವಿಐಪಿ ಕಾರಿಡಾರ್ ಆಗುತ್ತದೆ. ಶೇ 90 ಜನ ಮಧ್ಯಮ ವರ್ಗದವರು ಹಾಗೂ ಬಡವರು, ಬೈಕ್, ಸೈಕಲ್‌ಗೆ ಎಂಟ್ರಿ ಇಲ್ಲ. ಕೇವಲ ಕಾರಿಗೆ ಮಾತ್ರ ಎಂಟ್ರಿ, ಅದಕ್ಕೆ ಇದು ವಿಐಪಿ ರೋಡ್. ₹ 8 ಸಾವಿರ ಕೋಟಿಗೆ ಟೆಂಡರ್ ಕರೆದಿದ್ದಾರೆ. 4 ಸಾವಿರ ಕೋಟಿ ಪೇಮೆಂಟ್ ಕೊಡಬೇಕು. ಈಗ ಸಾಲ ಮಾಡಲು ಹೊರಟಿದ್ದಾರೆ  ಎಂದು ವಾಗ್ದಾಳಿ ನಡೆಸಿದರು. 

ಟನಲ್ ರೋಡ್‌ಗೂ ಮೊದಲು ಇರೋ ಗುಂಡಿಗಳನ್ನ ಮುಚ್ಚಿ. ಕಣ್ಣಿಗೆ ಕಾಣುವ ರಸ್ತೆ ಬಿಟ್ಟು, ಕಾಣದ ಟನಲ್ ರೋಡ್ ಮಾಡಲು ಹೊರಟ್ಟಿದ್ದೀರಾ? ಸಿಎಂ ಹೇಳಿದ ಮೇಲೆ ಗುಂಡಿ ಮುಚ್ಚುತ್ತಾರೆ ಅಂತ ಜನ ಅಂದುಕೊಂಡಿದ್ದರು. ಆದರೆ ಸಿಎಂ ಮಾತಿಗೆ ಕಾರ್ಪೋರೇಷನ್ ಅವರು ಬೆಲೆ ಕೊಟ್ಟಿಲ್ಲ ಎಂದು ಟೀಕಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ