ಮತ್ತೆ ಗಿಫ್ಟ್ ಪಡೆದು ವಿವಾದವನ್ನು ಎಳೆದುಕೊಂಡ ಸಿಎಂ

ಶನಿವಾರ, 16 ಡಿಸೆಂಬರ್ 2017 (18:31 IST)
ಈ ಹಿಂದೆ ಕಲಬುರಗಿ ನಗರದ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಉದ್ಘಾಟನೆ ಸಂದರ್ಭದಲ್ಲಿ ಸಿಎಂಗೆ ಚಿನ್ನಾಭರಣದ ಗಿಫ್ಟ್ ನೀಡಲಾಗಿತ್ತು‌. ಆದರೆ ಅಂದು ಗಿಫ್ಟ್ ನ್ನು ಪಡೆದುಕೊಳ್ಳಲು ಸಿಎಂ ನಿರಾಕರಿಸಿದ್ರು. ಜತೆಗೆ ಬೆಲೆಬಾಳುವ ವಾಚ್ ಪಡೆದು ವಿವಾದಗಳೇ ಎದ್ದಿದ್ದವು. ಅದಕ್ಕೆ ಗಿಫ್ಟ್ ಸಹವಾಸವೇ ಬೇಡ ಅಂತ ಸಿಎಂ ಹೇಳುದ್ರು. ಆದ್ರೆ ಇಂದು ಶಾಸಕ ಮಾಲೀಕಯ್ಯ ಗುತ್ತೇದಾರ ನೀಡಿದ ಚಿನ್ನಾಭರಣದ ಗಿಫ್ಟ್ ಪಡೆಯೋ ಮೂಲಕ ತಾವೋಬ್ಬ ಎರಡು  ಮುಖದ ನಾಯಕ ಅಂತ ಸಾಬೀತುಪಡಿಸಿದ್ದಾರೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದಲ್ಲಿ ಸಾಧನಾ ಸಂಭ್ರಮ ಕಾರ್ಯಕ್ರಮ ನಡೆಯಿತು. ಸಿದ್ದರಾಮಯ್ಯ ಅವರಿಗೆ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಚಿನ್ನದ ಕಿರೀಟ, ಬೆಳ್ಳಿಯ ಖಡ್ಗ, ಮತ್ತು ಬೆಳ್ಳಿಯ ಹಾರ ಹಾಕಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆ ನಡೆಸುತ್ತಿದೆ. ಆದರೆ ಈಗಾಗಲೇ ಜನ ಪರಿವರ್ತನೆಯಾಗಿದ್ದು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂದರು. 
 
ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಸಾಧನಾ ಸಂಭ್ರಮ ಕಾರ್ಯಕ್ರಮ ಮುಂದುವರಿದಿದೆ. ಕಲಬುರ್ಗಿ ಜಿಲ್ಲೆ ಅಫಜಲಪುರ ಪಟ್ಟಣದಲ್ಲಿ ನಡೆದ ಸಾಧನಾ ಸಂಭ್ರಮ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದರು. 
 
ಅಫಜಲಪುರ ಸಾಧನೆಯ ಕೈಪಿಡಿ ಬಿಡುಗಡೆ ಮಾಡಿದ ನಂತರ ೧೩೦ ಕೋಟಿ ರೂಪಾಯಿ ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಈ ವೇಳೆ ಸ್ಥಳೀಯ ಶಾಸಕ ಮಾಲಿಕಯ್ಯ ಗುತ್ತೇದಾರ ಬಂಗಾರದ ಕಿರೀಟ,  ಬೆಳ್ಳಿಯ ಖಡ್ಗ ಮತ್ತು ಬೆಳ್ಳಿಯ ಹಾರ ಹಾಕಿ ಸನ್ಮಾನಿಸಿದರು. 
 
ನಂತರ ಮಾತನಾಡಿದ ಸಿದ್ದರಾಮಯ್ಯ, ಸುಳ್ಳೇ ಯಡಿಯೂರಪ್ಪ ಅವರ ಮನೆ ದೇವರು. ಅವರು ಹೇಳುವುದೆಲ್ಲ ಸುಳ್ಳು. ಸುಳ್ಳುಗಳನ್ನೇ ಹೇಳುತ್ತಾ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆ ನಡೆಸುತ್ತಿದ್ದಾರೆ. ಆದರೆ ಈಗಾಗಲೇ ಜನ ಪರಿವರ್ತನೆಗೊಂಡಿದ್ದು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದರು.
 
 ಸಂಸ್ಕಾರ ಮತ್ತು ಸಂಸ್ಕೃತಿ ಬಗ್ಗೆ ಬಿಜೆಪಿ ಮುಖಂಡರು ಹೇಳುತ್ತಲೇ ಇದ್ದಾರೆ. ಆದರೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗಳನ್ನು ನೋಡಿದರೆ ಗೊತ್ತಾಗುತ್ತದೆ ಬಿಜೆಪಿಯವರ ಸಂಸ್ಕಾರ ಮತ್ತು ಸಂಸ್ಕೃತಿ ಏನೆಂಬುದು. ಅನಂತ್ ಕುಮಾರ್ ಹೆಗಡೆ ಅಧಿಕಾರದಲ್ಲಿರಲು ನಾಲಾಯಕ್ ವ್ಯಕ್ತಿ. ಬೆಂಕಿ ಹಚ್ಚುವ ಕೆಲಸವನ್ನು ಮಾಡುವ ಇಂಥವರನ್ನು ಯಾರೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು. 
 
ಬಿಜೆಪಿ ಮುಖಂಡರು ಏನು ಬೇಕಾದರೂ ಬೈದುಕೊಂಡು ಅಡ್ಡಾಡಲಿ. ನಾನು ಮಾತ್ರ ನನ್ನ ಕೆಲಸಗಳನ್ನು ಜನತೆಯ ಮುಂದಿಟ್ಟು ಚುನಾವಣೆಗೆ ಹೋಗುತ್ತೇನೆ. ಜನತೆ ನನಗೆ ಖಂಡಿತ ಮತ್ತೊಮ್ಮೆ ಆಶೀರ್ವಾದ ಮಾಡುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಶರಣಪ್ರಕಾಶ ಪಾಟೀಲ, ಪ್ರಿಯಾಂಕ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ