ಕೊರೊನಾಗೆ ಮೊದಲ ಸಾವು ಕಂಡ ಜಿಲ್ಲೆಯಲ್ಲಿ ಮಾ.31ರವರೆಗೆ ನಿಷೇಧಾಜ್ಞೆ
ಮಂಗಳವಾರ, 24 ಮಾರ್ಚ್ 2020 (21:45 IST)
ಕೊರೊನಾ ವೈರಸ್ ನಿಂದಾಗಿ ದೇಶದಲ್ಲಿ ಮೊದಲ ಸಾವು ಕಂಡಿರುವ ಕಲಬುರಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಮತ್ತೆ ಎರಡನೇ ಸಲ ವಿಸ್ತರಣೆ ಮಾಡಲಾಗಿದೆ.
ಕೊರೋನಾ ವೈರಸ್ ತಡೆಗಟ್ಟುವ ಮತ್ತು ಜನಸಂದಣಿ ನಿಯಂತ್ರಣದಲ್ಲಿಡಲು ಈಗಾಗಲೆ ಕಲಬುರಗಿ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144 ನಿಷೇಧಾಜ್ಞೆಯನ್ನು ಮಾರ್ಚ್ 31ರ ರಾತ್ರಿ 8 ಗಂಟೆ ವರೆಗೆ ವಿಸ್ತರಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.
ಕೊರೋನಾ ಸೊಂಕಿನಿಂದ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಕಲಬುರಗಿ ಜಿಲ್ಲೆಯಾದ್ಯಂತ ಮಾರ್ಚ್ 31ರ ವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಿದ್ದಾರೆ.
ನಿಷೇಧಾಜ್ಞೆಯ ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಧಾರ್ಮಿಕ ಮತ್ತು ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಗುಂಪು-ಗುಂಪಾಗಿ ಚಲಿಸುವುದು ಮತ್ತು ಅನಾವಶ್ಯಕವಾಗಿ ಸಂಚರಿಸುವಂತಿಲ್ಲ ಮತ್ತು ಈ ಆದೇಶದಿಂದ ಭಯಪಟ್ಟು ಅಗತ್ಯಕ್ಕಿಂತ ಹೆಚ್ಚು ಅವಶ್ಯ ದಾಸ್ತಾನುಗಳನ್ನು ಸಹ ಖರೀದಿಸುವ ಅಗತ್ಯವಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದು, ಅಗತ್ಯ ಸೇವೆಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಡಿ.ಸಿ. ಶರತ್ ಬಿ. ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.