ಬೆಂಗಳೂರು: ವಾಮಾಚಾರದ ನೆಪದಲ್ಲಿ ಕೋಟ್ಯಂತರ ರೂ. ಪಡೆದು ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಇದೀಗ ಮೋಸಹೋದವರು ದೂರು ನೀಡಿದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೃಹಿಣಿ ಗೀತಾ ಗುರುದೇವ್ ನೀಡಿದ ದೂರಿನ ಮೇರೆಗೆ ತ್ಯಾಗರಾಜನಗರದ ಜಯಶ್ರೀ ಹಾಗೂ ರಾಕೇಶ್ ಎಂಬುವರನ್ನು ಬಂಧಿಸಿ 1 ಕೆ. ಜಿ ಚಿನ್ನ, 10 ಲಕ್ಷ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಏಳು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತ್ಯಾಗರಾಜನಗರದಲ್ಲಿ ನಿವಾಸಿಯಾಗಿರುವ ಗೀತಾ ಗುರುದೇವ್ ಮನೆಗೆ ಆರೋಪಿ ಜಯಶ್ರೀ ಆಗಾಗ ಮನೆಗೆಲಸಕ್ಕೆಂದು ಬರುತ್ತಿದ್ದರು. ಕೆಲ ವರ್ಷಗಳಿಂದ ಪರಿಚಯ ಇದ್ದಿದ್ದರಿಂದ ಮೃದು ಹಾಗೂ ಸೂಕ್ಷ್ಮ ಸ್ವಭಾವದ ಗೀತಾ ಕೌಟುಂಬಿಕ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಳು. ಮಹಿಳೆಯ ಮನಸ್ಥಿತಿ ಗ್ರಹಿಸಿದ್ದ ಆರೋಪಿ ವಾಮಾಚಾರ ಪೂಜೆಯಲ್ಲಿ ಪರಿಣಿತಿ ಹೊಂದಿದ್ದೇನೆ. ನಿಮಗೆ ಸಂಬಂಧಿಸಿದ ಕೆಲ ವ್ಯಕ್ತಿಗಳು ನಿಮಗೆ ಮಾಟ ಮಂತ್ರ ಮಾಡಿಸಿದ್ದಾರೆ. ಇದರಿಂದ ಹೊರಬರಲು ಮಾಟ ಮಂತ್ರದ ಪೂಜೆ ಮಾಡಿಸಬೇಕಿದೆ ಎಂದು ಸಲಹೆ ನೀಡಿದ್ದಳು ಎನ್ನಲಾಗಿದೆ.
ಇದರಂತೆ ಆರೋಪಿ ಹಾಗೂ ಆಕೆಯ ಸಹಚರರು ಎಲ್ಲರೂ ಮಾಟ ಮಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನ ಮನೆಯ ಮೂಲೆಗಳಲ್ಲಿ ಇಟ್ಟು ಹೋಗಿದ್ದರು. ಎಲ್ಲಾ ಮುಗಿದ ಬಳಿಕ ಮೊದಲ ಕಂತಿನಲ್ಲಿ 1.42 ಕೋಟಿ ನೀಡಿದ್ದಾರೆ. ನಂತರ 30 ಲಕ್ಷ, ಬಳಿಕ 1.72 ಕೋಟಿ ಮತ್ತೆ 1.90 ಕೋಟಿ ಹೀಗೆ ಹಲವು ಕಂತುಗಳಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 4.41 ಕೋಟಿ ಹಣವನ್ನು ಆರೋಪಿಗಳು ಸುಲಿಗೆ ಮಾಡಿದ್ದರು. 13 ವಿವಿಧ ಬ್ಯಾಂಕ್ ಖಾತೆಗಳಿಂದ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.