ರೈಲಿಗೆ ಬೆಂಕಿ ಹಚ್ಚಿದ ಆಗಂತುಕ; 3 ಸಾವು

ಬುಧವಾರ, 5 ಏಪ್ರಿಲ್ 2023 (16:31 IST)
ಕೇರಳದ ಕೋಯಿಕ್ಕೋಡ್‌ನ ತಡರಾತ್ರಿ ಚಲಿಸುತ್ತಿದ್ದ ರೈಲಿನ ಬೋಗಿಯೊಂದಕ್ಕೆ ನುಗ್ಗಿದ ಆಗಂತುಕನೊಬ್ಬ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಒಂಬತ್ತು ಮಂದಿಗೆ ಸುಟ್ಟ ಗಾಯಗಳಾಗಿವೆ. ರಾತ್ರಿ 9.30ರ ಸುಮಾರಿನಲ್ಲಿ ಅಲಪ್ಪುವ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಕಣ್ಣೂರು ಜಿಲ್ಲೆಯ ಮಹಿಳೆ, ಸುಮಾರು ಎರಡು ವರ್ಷದ ಹೆಣ್ಣು ಮಗು ಮತ್ತು ಇನ್ನೊಬ್ಬ ವ್ಯಕ್ತಿಯ ಮೃತದೇಹಗಳು ರೈಲು ಹಳಿಯ ಮೇಲೆ ಪತ್ತೆಯಾಗಿವೆ. ಗಾಯಗೊಂಡಿರುವ 9 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಅವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಅಪರಿಚಿತ ವ್ಯಕ್ತಿಯೊಬ್ಬ ಪೆಟ್ರೋಲ್ ತರಹದ ದ್ರವ ತುಂಬಿದ್ದ ಎರಡು ಬಾಟಲಿಗಳೊಂದಿಗೆ ‘ಡಿ1’ ಕೋಚ್‌ಗೆ ನುಗ್ಗಿ ಪ್ರಯಾಣಿಕರು ಮತ್ತು ರೈಲಿನ ಬೋಗಿಗೆ ಅದನ್ನು ಚೆಲ್ಲಿ, ಬೆಂಕಿ ಹಚ್ಚಿದ ಎಂದು ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ತಿಳಿಸಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಕೆಲ ಪ್ರಯಾಣಿಕರು ರೈಲಿನ ಚೈನ್ ಎಳೆದರು. ರೈಲು ನಿಂತಿದ್ದರಿಂದ ಆರೋಪಿ ಪರಾರಿಯಾದ. ಆತನಿಗೂ ಸುಟ್ಟ ಗಾಯಗಳಾಗಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಲೇ ರೈಲಿನಿಂದ ಹಾರಿ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ