ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವ ಮರ್ಡರ್ ಕೇಸ್: ಸಿಬಿಐ ತನಿಖೆಗೆ ಒತ್ತಾಯ
ಶುಕ್ರವಾರ, 7 ಸೆಪ್ಟಂಬರ್ 2018 (16:11 IST)
ದಲಿತ ಮುಖಂಡ ರಾಹುಲ್ ಬೀಳಗಿ ಕೊಲೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ. ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದು, ಸಿಬಿಐ ತನಿಖೆಗೆ ವಹಿಸುವಂತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಆಳಂದದ ಜಿಡಗಾ ಕ್ರಾಸ್ ನಲ್ಲಿ ದಲಿತ ಮುಖಂಡ ರಾಹುಲ್ ಬೀಳಗಿ ಕೊಲೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ. ಆಳಂದ ತಾಲೂಕಿನಲ್ಲಿ ಬಿಜೆಪಿಯನ್ನು ಬಗ್ಗು ಬಡಿಯಲೆಂದೇ ಕಾಂಗ್ರೆಸ್ ಮುಖಂಡರು ಕೊಲೆ ಮಾಡಿಸಿದ್ದಾರೆ ಎಂದು ಶಾಸಕ ಸುಭಾಷ್ ಗುತ್ತೇದಾರ ಆರೋಪಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದು, ಸಿಬಿಐ ತನಿಖೆಗೆ ವಹಿಸುವಂತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆಯ ಮುನ್ನಾ ದಿನವಾದ ಸೆ. 2 ರ ರಾತ್ರಿ ರಾಹುಲ್ ಬೀಳಗಿ ಎಂಬ ಯುವಕನ ಕೊಲೆ ನಡೆದಿತ್ತು. ಬೊಲೆರೋದಲ್ಲಿ ಬಂದಿದ್ದ ದುಷ್ಕರ್ಮಿಗಳು ಬೈಕ್ ಮೇಲೆ ಹೊರಟಿದ್ದ ರಾಹುಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳು ಮರು ದಿನ ಜಿಲ್ಲಾಧಿಕಾರಿ ಕಛೇರಿ ಎದುರು ಶವ ಇಟ್ಟು ಪ್ರತಿಭಟಿಸಿದ್ದವು. ಇದೀಗ ಬಿಜೆಪಿ ಅಖಾಡಕ್ಕಿಳಿದಿದ್ದು, ರಾಜಕೀಯ ದುರುದ್ದೇಶದಿಂದ ಕೊಲೆ ನಡೆದಿದೆ ಎಂದು ಆರೋಪಿಸಿದೆ.
ಭೂಸನೂರು ಗ್ರಾಮದ ಬಾಬುಗೌಡ ಪಾಟೀಲ, ಅಪ್ಪಾರಾವ್ ಪಾಟೀಲ, ಸಂಜೀವಕುಮಾರ್ ಪಾಟೀಲ ಮತ್ತವರ ಬೆಂಬಲಿಗರು ಕೊಲೆ ಮಾಡಿಸಿದ್ದಾರೆ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸುಭಾಷ್ ಗುತ್ತೇದಾರ ಆಗ್ರಹಿಸಿದ್ದಾರೆ.
ಭೂಸನೂರು ಗ್ರಾಮದ ಅಪ್ಪಾರಾವ್ ಪಾಟೀಲ, ಬಾಬುಗೌಡ ಪಾಟೀಲ ಮತ್ತಿತರರು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಈ ಮುಖಂಡರ ಹಿಂದೆ ಮಾಜಿ ಶಾಸಕ ಬಿ.ಆರ್.ಪಾಟೀಲ ಅವರ ಕುಮ್ಮಕ್ಕಿದೆ. ಈ ಮುಂಚೆಯೂ ಕೊಲೆ ಬೆದರಿಕೆಯಿದ್ದು, ಸೂಕ್ತ ರಕ್ಷಣೆ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಭದ್ರತೆ ಕಲ್ಪಿಸಿಲ್ಲ. ರಾಹುಲ್ ಕೊಲೆ ನಡೆಯುವಲ್ಲಿ ಪೊಲೀಸರ ನಿರ್ಲಕ್ಷ್ಯವೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ.