ರಾಜ್ಯಾದೆಂತ ಮುಂದಿನ 4 ದಿನ ವರುಣಾರ್ಭಟ

ಗುರುವಾರ, 5 ಮೇ 2022 (20:55 IST)
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲೆ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆ ಸುರಿಯಲಿದೆ, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
 
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದಿದೆ.
 
ಸಿಲಿಕಾನ್ ಸಿಟಿ ರೇನ್ ಅಪ್ಡೇಟ್;
 
ಬುಧವಾರ ಸಿಲಿಕಾನ್ ಸಿಟಿಯಲ್ಲಿ ಸತತ 4ನೇಯ ದಿನವೂ ಮಳೆ ಆರ್ಭಟ ಮುಂದುವರಿದಿತ್ತು, ಗಾಳಿ-ಮಳೆಯ ಅರ್ಭಟಕ್ಕೆ ವಿವಿಧೆಡೆ ಮರದ ಕೊಂಬೆಗಳು ಮುರಿದು ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.
 
ಜನ ಕೆಲಸ ಮುಗಿಸಿಕೊಂಡು ಮನೆ ಸೇರುವ ಹೊತ್ತಿಗೆ ಶುರುವಾದ ಮಳೆ ಸುಮಾರು ಒಂದು ತಾಸು ಸುರಿಯಿತು. ಡಬಲ್ ರೋಡ್, ಶಾಂತಿನಗರ, ಮೆಜೆಸ್ಟಿಕ್ ಸೇರುವ ರಸ್ತೆಗಳು, ಶಿವಾನಂದ ವೃತ್ತ ಸೇರಿ ಹಲವು ಜಂಕ್ಷನ್‌ಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸಂಚಾರ ನಿಧಾನ ಗತಿಯಲ್ಲಿತ್ತು. 
 
ಕೆಲ ರಸ್ತೆಗಳಲ್ಲಿ ಗುಂಡಿ ಬಿದ್ದು ನೀರು ತುಂಬಿಕೊಂಡಿತ್ತು. ಬಸವೇಶ್ವರನಗರದ ಕಿರ್ಲೋಸ್ಕರ್ ಕಾಲೋನಿ, ಜಯನಗರ 37ನೇ ಕ್ರಾಸ್, ಭವಾನಿನಗರದಲ್ಲಿ ಮರದ ರೆಂಬೆಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತುಸು ವ್ಯತ್ಯಯ ಉಂಟಾಯಿತು. ಕೆಲವೇ ಹೊತ್ತಿನಲ್ಲಿ ಬಿಬಿಎಂಪಿ ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ತೆರವುಗೊಳಿಸಿದರು. ಹೃದಯಭಾಗದಲ್ಲಿ ಮಳೆ ಅಬ್ಬರ ಕಡಿಮೆ ಇದ್ದು, ಬೊಮ್ಮನಹಳ್ಳಿ ಮತ್ತು ರಾಜರಾಜೇಶ್ವರಿ ನಗರದ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ