ಯುದ್ಧದಲ್ಲಿ ಯಾರೂ ಗೆದ್ದಿಲ್ಲ : ನರೇಂದ್ರ ಮೋದಿ

ಮಂಗಳವಾರ, 3 ಮೇ 2022 (08:17 IST)
ಬರ್ಲಿನ್ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಯಾರೂ ಕೂಡ ಗೆದ್ದಿಲ್ಲ.
 
ಯುದ್ಧವನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬರ್ಲಿನ್ನಲ್ಲಿ ತಿಳಿಸಿದ್ದಾರೆ.

ಈ ಯುದ್ಧದಲ್ಲಿ ಯಾರು ವಿಜೇತರಾಗಿರುವುದಿಲ್ಲ ಮತ್ತು ಇದರಿಂದಾಗಿ ಎಲ್ಲರೂ ನಷ್ಟವನ್ನು ಅನುಭವಿಸಿರುತ್ತಾರೆ. ಆದ್ದರಿಂದ ನಾವು ಶಾಂತಿ ಪರವಾಗಿದ್ದೇವೆ ಎಂದು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ಸಭೆಯ ನಂತರ ಹೇಳಿದ್ದಾರೆ.

ಉಕ್ರೇನ್ ಸಂಘರ್ಷದಿಂದಾಗಿ ತೈಲ ಬೆಲೆಗಳು ಗಗನಕ್ಕೇರುತ್ತಿವೆ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳ ಕೊರತೆಯಾಗುತ್ತಿದೆ. ಇದು ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಬೆಳವಣಿಗೆಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಗಂಭೀರ ವಿಚಾರವಾಗಿದೆ ಎಂದಿದ್ದಾರೆ. 

60ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮೋದಿ ಅವರು ಕಳವಳ ವ್ಯಕ್ತಪಡಿಸಿದರು. ಫೆಬ್ರವರಿ 24ರಂದು ರಷ್ಯಾ, ಉಕ್ರೇನ್ ಮೇಲೆ ದಾಳಿಯನ್ನು ಆರಂಭಿಸಿದ್ದರಿಂದ ಸಾವಿರಾರು ನಾಗರಿಕರು ಸಾವನ್ನಪ್ಪಿದರು ಮತ್ತು ಲಕ್ಷಾಂತರ ಮಂದಿ ಸ್ಥಳಾಂತರಗೊಂಡರು.

ಉಕ್ರೇನ್ನಲ್ಲಿ ಆರ್ಥಿಕ ಬಿಕ್ಕಟ್ಟು ಆರಂಭವಾದಗಲಿಂದಲೂ, ನಾವು ತಕ್ಷಣ ಕದನ ವಿರಾಮಕ್ಕೆ ಕರೆ ನೀಡಿದ್ದೆವು. ವಿವಾದವನ್ನು ಪರಿಹರಿಸಲು ಮಾತುಕತೆಯೇ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದ್ದೆವು ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ