ಓಲಾ ಚಾಲಕನನ್ನು ಅಪಹರಿಸಿ, ಹಣಕ್ಕಾಗಿ ಆತನ ಪತ್ನಿಯನ್ನು ಬೆತ್ತಲೆಗೊಳಿಸಿದ ದುಷ್ಕರ್ಮಿಗಳು
ಮಂಗಳವಾರ, 4 ಡಿಸೆಂಬರ್ 2018 (06:52 IST)
ಬೆಂಗಳೂರು : ಪ್ರಯಾಣಿಕರಂತೆ ನಟಿಸಿ ಕಾರು ಹತ್ತಿದ ದುಷ್ಕರ್ಮಿಗಳು ಓಲಾ ಚಾಲಕನನ್ನು ಅಪಹರಿಸಿ, ಆತನ ಪತ್ನಿಯನ್ನು ಬೆತ್ತಲೆಗೊಳಿಸಿ ಅದನ್ನು ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಬೊಮ್ಮಸಂದ್ರದಿಂದ ಕ್ಯಾಬ್ ಚಾಲಕನಿಗೆ ಪ್ರಯಾಣಿಕರನ್ನು ಪಿಕ್‍ಅಪ್ ಮಾಡಿಕೊಳ್ಳಲು ಕರೆ ಮಾಡಿದ ದುಷ್ಕರ್ಮಿಗಳು ನಂತರ ಅಲ್ಲಿಗೆ ಬಂದ ಕ್ಯಾಬ್ ಹತ್ತಿ ಚಾಲಕನ ಮೇಲೆ ಹಲ್ಲೆ ಮಾಡಿ ಆತನಿಂದ ಹಣವನ್ನು ಪಡೆದು ಚನ್ನಪಟ್ಟಣದ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿ ಚಾಲಕನನ್ನು ಕೂಡಿ ಹಾಕಿದ್ದಾರೆ.
ಅಷ್ಟೇ ಅಲ್ಲದೆ ಚಾಲಕನ ಫೋನ್ ಪಡೆದು ಆತನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬೆತ್ತಲಾಗಿ ನಿಲ್ಲು ಇಲ್ಲದಿದ್ದರೆ ಪತಿಯನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ. ನಂತರ ಬೆತ್ತಲಾದ ಆಕೆಯ ವಿಡಿಯೋ ಮಾಡಿ ಹಣ ನೀಡದಿದ್ದರೆ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ನಂತರ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಚಾಲಕ ನೇರವಾಗಿ ಚನ್ನಪಟ್ಟಣ ಪೊಲೀಸರ ಬಳಿ ಹೋಗಿದ್ದಾನೆ. ಆದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ದೂರು ದಾಖಲಿಸಿಕೊಳ್ಳದ ಹಿನ್ನಲೆಯಲ್ಲಿ ಬಳಿಕ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಅಪಹರಣ, ದರೋಡೆ ಮತ್ತು ಬೆದರಿಕೆ ದೂರನ್ನು ದಾಖಲಿಸಿಕೊಂಡ ಪೊಲೀಸರು ಕೂಡಲೇ ಕಾರ್ಯಪ್ರವೃತರಾಗಿ ರಾಬಿನ್ ಮತ್ತು ಅರುಣ್ ಬೆತ್ನಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನುಳಿದ ಇಬ್ಬರು ತಲೆಮರೆಸಿಕೊಂಡಿದ್ದು, ಇವರಿಬ್ಬರ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.