ಬೆಂಗಳೂರು: ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟಗಳು ಏಕಪಕ್ಷೀಯವಾಗಿ ಹಾಲಿನ ಖರೀದಿ ದರದಲ್ಲಿ ₹1.50 ಕಡಿತ ಮಾಡಿ ರೈತರ ಆಕ್ರೋಶಕ್ಕೆ ತುತ್ತಾಗಿದೆ.
ಈ ಸಂಬಂಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರ ದರ್ಪದ ಅಮಲಿನಿಂದ ಕೊಬ್ಬಿರುವ ರಾಜ್ಯ ಕಾಂಗ್ರೆಸ್ ಸರಕಾರ ಅನ್ನದಾತನ ಮೇಲೆ ಬರೆಯ ಬರೆ ಎಳೆಯುತ್ತಿದೆ. ರೈತನ ಜೀವನಾಧಾರವಾಗಿರುವ ಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ ಬಿದ್ದಿದೆ. ಪರಿಣಾಮ; ಹಾಲಿನ ಖರೀದಿ ದರಕ್ಕೆ ಕತ್ತರಿ ಪ್ರಯೋಗವಾಗಿದೆ.
ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟಗಳು ಏಕಪಕ್ಷೀಯವಾಗಿ ಹಾಲಿನ ಖರೀದಿ ದರದಲ್ಲಿ ₹1.50 ಕಡಿತ ಮಾಡಿವೆ. (ಹೊಸ ಖರೀದಿ ದರ ₹30.50 ರಿಂದ ₹29ಕ್ಕೆ ಕುಸಿದಿದೆ). ಕಾಮಧೇನುವನ್ನೇ ನಂಬಿದ್ದ ರೈತನ ಕರುಳಿಗೆ ಕೊಳ್ಳಿ ಬಿದ್ದಿದೆ.
ನಮ್ಮದು ರೈತಪರ ಸರಕಾರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತ ಗಮನ ಹರಿಸಬೇಕು. ಅವರಿಗೆ ಅಷ್ಟು ಸಮಯ ಇದೆ ಎಂದು ನಾನಾದರೂ ಪರಿಭಾವಿಸುತ್ತೇನೆ.