ಸಚಿವ ಆನಂದ್ ಸಿಂಗ್ ಹಾಗೂ ಶಾಸಕ ಗಣೇಶ್ ನಡುವಿನ ಗಲಾಟೆ

ಸೋಮವಾರ, 4 ಅಕ್ಟೋಬರ್ 2021 (21:11 IST)
ಬೆಂಗಳೂರು: ಸಚಿವ ಆನಂದ್ ಸಿಂಗ್ ಹಾಗೂ ಶಾಸಕ ಗಣೇಶ್ ನಡುವಿನ ಗಲಾಟೆ ಹಾಗೂ ಹಲ್ಲೆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಇಬ್ಬರೂ ತಮ್ಮ ನಡುವಣ ವೈಮನಸ್ಸು ಬಿಟ್ಟು ರಾಜಿ ಮಾಡಿಕೊಂಡಿದ್ದರು. ಈ ಕುರಿತು ಇಬ್ಬರೂ ತಮ್ಮ ಹೇಳಿಕೆಗಳನ್ನು ನ್ಯಾಯಾಲಯಕ್ಕೆ ಲಿಖಿತವಾಗಿ ಸಲ್ಲಿಸಿದ್ದರು.
ಇನ್ನು ಗಣೇಶ್ ಪರ ವಾದ ಮಂಡಿಸಿದ್ದ ವಕೀಲರು, ಕೊಲೆ ಯತ್ನ ಆರೋಪ ಮಾಡಿರುವ ಹಿನ್ನೆಲೆ ರಾಜಿ ಸಂಧಾನ ಸಾಧ್ಯವಾಗಿರಲಿಲ್ಲ. ಆದರೆ, ಪ್ರಕರಣದಲ್ಲಿ ಕೊಲೆ ಉದ್ದೇಶ ಅಥವಾ ಯತ್ನ ಇರಲಿಲ್ಲ. ಹಣಕಾಸಿನ ವಿಚಾರವಾಗಿ ನಡೆದಿದ್ದ ಗಲಾಟೆಯಷ್ಟೇ. ಇಬ್ಬರೂ ಈಗಾಗಲೇ ರಾಜಿ ಮಾಡಿಕೊಳ್ಳಲು ಒಪ್ಪಿರುವುದರಿಂದ ಕೊಲೆ ಯತ್ನ ಸೆಕ್ಷನ್ ಅನ್ವಯಿಸುವುದಿಲ್ಲ ಎಂದು ವಾದಿಸಿದ್ದರು.
ಈ ಹಿನ್ನೆಲೆ ನ್ಯಾಯಾಲಯ ಶಾಸಕರ ನಡುವಿನ ಗಲಾಟೆ ಹಾಗೂ ಹಲ್ಲೆ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಏನಿದು ಘಟನೆ?: ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ 2019 ಜನವರಿ 19ರ ರಾತ್ರಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಗಲಾಟೆ ನಡೆದಿತ್ತು. ಜಗಳದಲ್ಲಿ ಆನಂದ್ ಸಿಂಗ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಆ ಬಳಿಕ ಆನಂದ್ ಸಿಂಗ್ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಗಣೇಶ್ ವಿರುದ್ಧ ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಡಿ ಎಫ್ಐಆರ್ ದಾಖಲಿಸಿದ್ದರು.
ಘಟನೆ ಬಳಿಕ ಶಾಸಕ ಗಣೇಶ್ ತಲೆ ಮರೆಸಿಕೊಂಡಿದ್ದರು. ನಂತರ ಹಿರಿಯ ನಾಯಕರ ಸೂಚನೆಯಂತೆ ಇಬ್ಬರೂ ಸಂಧಾನ ಮಾಡಿಕೊಂಡು, ರಾಜಿಯಾಗಲು ನಿರ್ಧರಿಸಿದ್ದರು. ಆದರೆ, ನ್ಯಾಯಾಲಯ ಕೊಲೆ ಯತ್ನ ಆರೋಪ ಇದ್ದುದರಿಂದ ರಾಜಿ ಸಮ್ಮತಿಸಿರಲಿಲ್ಲ. ನಂತರ ತಲೆ ಮರೆಸಿಕೊಂಡಿದ್ದ ಗಣೇಶ್ ಹಾಗೂ ಆನಂದ್ ಸಿಂಗ್ ಇಬ್ಬರೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ರಾಜಿ ಮಾಡಿಕೊಳ್ಳಲು ಲಿಖಿತವಾಗಿ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯ ಇಬ್ಬರೂ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಒಪ್ಪಿಗೆ ನೀಡುವಂತೆ ಸೂಚಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ