ನೇಪಾಳ ಮೂಲದ ಮೀನಾರಾಜ್ ಭಟ್(37), ಆತನ ಸಹೋದರ ತುಲಾರಾಮ್ ಭಟ್(33), ನಾರಾಯಣ ಶ್ರೇಷ್ಟ (46), ಶಿವ ಭಂಡಾರಿ(37) ಮತ್ತು ಗೋವಿಂದಪುರ ನಿವಾಸಿ ಸಲೀಂ ಪಾಷಾ(24) ಬಂಧಿತರು. ಆರೋಪಿಗಳಿಂದ 10.89 ಲಕ್ಷ ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣ, 1290 ಗ್ರಾಂ ಬೆಳ್ಳಿಯ ವಸ್ತುಗಳು, ಎಂಟು ವಿದೇಶಿ ಕರೆನ್ಸಿಗಳು, 12,000 ರೂ. ನಗದು, ಒಂದು ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಆರೋಪಿಗಳ ಬಂಧನದಿಂದ ಮೂರು ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೆÇಲೀಸರು ತಿಳಿಸಿದರು.
ಆರೋಪಿಗಳ ಪೈಕಿ ಸಲೀಂ ಪಾಷಾ ಹಳೇ ಆರೋಪಿಯಾಗಿದ್ದು, ಈತನ ವಿರುದ್ಧ ನಗರದ ನಾನಾ ಠಾಣೆಗಳಲ್ಲಿ ಮನೆಗಳವು ಪ್ರಕರಣಗಳು ದಾಖಲಾಗಿವೆ. ಇತರೆ ಆರೋಪಿಗಳು ಗೋವಿಂದಪುರ ಠಾಣೆ ವ್ಯಾಪ್ತಿಯ ಅಪಾರ್ಟ್‍ಮೆಂಟ್‍ಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಭದ್ರತಾ ಸಿಬ್ಬಂದಿಗಳಿಗೆ ಸಲೀಂ ಪಾಷಾನ ಪರಿಚಯವಾಗಿದೆ. ಸಲೀಂ ನೇಪಾಳ ಮೂಲದವರಿಗೆ ಇಂತಿಷ್ಟು ಕಮಿಷನ್ ಕೊಡುವುದಾಗಿ ಹೇಳಿ ಕೃತ್ಯಕ್ಕೆ ಸಹಕಾರ ನೀಡುವಂತೆ ಕೋರುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳು ತಾವು ಕೆಲಸ ಮಾಡುವ ಮನೆ ಮಾಲೀಕರ ಚಟುವಟಿಕೆಗಳು ಮತ್ತು ಮನೆಯ ನಕಲಿ ಕೀಗಳನ್ನು ಸಂಗ್ರಹಿಸುತ್ತಿದ್ದರು. ಮನೆಯವರು ಕಾರ್ಯನಿಮಿತ್ತ ಹೊರಗಡೆ ಅಥವಾ ಊರಿಗೆ ಹೋದಾಗ ಸಲೀಂ ಪಾಷಾನಿಗೆ ಮಾಹಿತಿ ನೀಡುತ್ತಿದ್ದರು. ಬಳಿಕ ಪಾಷಾ, ನಕಲಿ ಕೀ ಬಳಸಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಎಂದು ಪೆÇಲೀಸರು ಹೇಳಿದರು.
ಸಲೀಂ ಪಾಷಾನಿಂದ ಕಮಿಷನ್ ಲೆಕ್ಕದಲ್ಲಿ ನಗದು, ಚಿನ್ನಾಭರಣ ಪಡೆಯುತ್ತಿದ್ದ ಭದ್ರತಾ ಸಿಬ್ಬಂದಿಗಳು ಇತ್ತೀಚೆಗೆ ಕೃತ್ಯವೆಸಗಿ ನೇಪಾಳಕ್ಕೆ ಪರಾರಿಯಾಗುತ್ತಿದ್ದರು. ಈ ಮಾಹಿತಿ ಪಡೆದ ಗೋವಿಂದಪುರ ಠಾಣೆ ಇನ್‍ಸ್ಪೆಕ್ಟರ್ ಆರ್.ಪ್ರಕಾಶ್ ಮತ್ತು ಪಿಎಸ್‍ಐ ಇಮ್ರಾನ್ ಅಲಿ ಖಾನ್ ನೇತೃತ್ವದ ತಂಡ ಗಡಿಯಲ್ಲಿಯೇ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.