ಕಾಫಿ ತೋಟ ನಾಶ ಮಾಡಿದ ದುರುಳರು
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ, ಅಡಿಬೈಲು ಗ್ರಾಮದಲ್ಲಿ ವಿಶೇಷಚೇತನ ಚಂದ್ರು ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ 450ಕ್ಕೂ ಹೆಚ್ಚು ಫಸಲು ಬಿಡುವ ಕಾಫಿ ಹಾಗೂ ಮೆಣಸಿನ ಗಿಡಗಳನ್ನು ದುರುಳರು ನಾಶ ಮಾಡಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಹನ್ನೆರಡು ವರ್ಷಗಳಿಂದ ಕಷ್ಟಪಟ್ಟು ಕಾಫಿ, ಮೆಣಸಿನ ಗಿಡಗಳನ್ನು ಬೆಳೆಸಿದ್ದರು. ಆದರೆ ದುಷ್ಕರ್ಮಿಗಳು ಕಾಫಿ, ಮೆಣಸಿನ ಗಿಡಗಳನ್ನು ಕಡಿದು ಸಂಪೂರ್ಣ ನಾಶ ಮಾಡಿದ್ದಾರೆ. ಕುಟುಂಬ ನಿರ್ವಹಣೆ ಹಾಗೂ ಜೀವನಾಧಾರವಾಗಿದ್ದ ಕಾಫಿ, ಮೆಣಸಿನ ಗಿಡಗಳನ್ನು ಕಳೆದುಕೊಂಡು ಚಂದ್ರು ಹಾಗೂ ಕುಟುಂಬದವರು ಕಣ್ಣೀರಿಡುತ್ತಿದ್ದಾರೆ. ಈ ಹೀನ ಕೃತ್ಯವೆಸಗಿದ ದುರುಳರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.