ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಬೆಂಕಿ ಹಚ್ಚಿದ !

ಗುರುವಾರ, 7 ಜುಲೈ 2022 (08:11 IST)
ಕೊಪ್ಪಳ : ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಾಯಿಸಿದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಒಂದನೇ ಹೆಚ್ಚುವರಿ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಎಂ.ಜಿ.ಶಿವಳ್ಳಿಯವರು ಕಲಂ 448 ಅನ್ವಯ ಒಂದು ವರ್ಷ ಜೈಲು ಶಿಕ್ಷೆ ಒಂದು ಸಾವಿರ ರೂ. ದಂಡ ಹಾಗೂ 302 ಕಲಂ ಅನ್ವಯ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ 2015ರ ಜುಲೈ 27 ರಂದು ವಿಧವೆಯೊರ್ವಳು ತನ್ನ ಚಿಕ್ಕ ಮಗನ ಜೊತೆ ವಾಸವಿದ್ದಳು. ಆ ಸಮಯದಲ್ಲಿ ಸಂಗಾಪೂರ ಗ್ರಾಮದ ಬಾಲಪ್ಪ ತಂದೆ ಗೋವಿಂದಪ್ಪ ವಿಧವೆಯ ಮನೆಗೆ ತೆರಳಿ ಲೈಂಗಿಕ ಕ್ರಿಯೆಗೆ ಕರೆದಿದ್ದಾನೆ. ಆಗ ಆಕೆ ನಿರಾಕರಿಸಿ ಕೂಗಾಡಿದ್ದರಿಂದ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದ್ದಾನೆ. 

ಇದರಿಂದ ಮಹಿಳೆ ಗಂಭೀರ ಗಾಯಗೊಂಡಿದ್ದು, ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, 2015 ಆ 01 ರಂದು ಮಹಿಳೆ ಮೃತಪಟ್ಟಿದ್ದಳು.

ಗ್ರಾಮೀಣ ಪೊಲೀಸ್ ಠಾಣೆಯ ಅಂದಿನ ಸಿಪಿಐ ಆಗಿದ್ದ ಪ್ರಭಾಕರ್ ಧರ್ಮಟ್ಟಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಜೊತೆಗೆ ಮಹಿಳೆಯ ಸಾವಿಗೆ ಪರಿಹಾರಕ್ಕಾಗಿ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತೆ ಮೃತಳ ಪುತ್ರನಿಗೆ ಸೂಚನೆ ನೀಡಿದ್ದಾರೆ. ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ.ಎಸ್ ವಾದ ಮಂಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ