ಹಸುಗೂಸು ಬಿಟ್ಟು ಹೋಗಿದ್ದ ಮಹಿಳೆ ಮರಳಿ ಸಿಕ್ಕ ಮೇಲೆ ಹೇಳಿದ್ದೇನು?
ಶನಿವಾರ, 7 ಜುಲೈ 2018 (17:03 IST)
ಸಂತಾನಹರಣ ಶಸ್ರ್ತಚಿಕಿತ್ಸೆಗೆಂದು ಬಂದು 3 ತಿಂಗಳ ಹಸುಗೂಸನ್ನು ಬಿಟ್ಟು ಜೂ.20 ರ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿದ್ದ ಮಹಿಳೆ ಇದೀಗ ಪತ್ತೆಯಾಗಿದ್ದಾರೆ. ಹಾಗಾಗಿ ಹಸುಗೂಸು ತಾಯಿಯ ಮಡಿಲು ಸೇರುವ ಮೂಲಕ ನಾನಾ ರೀತಿಯ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದ್ದ ಪ್ರಕರಣ ಈಗ ಸುಖಾಂತ್ಯ ಕಂಡಿದೆ.
ಗಂಡನೊಂದಿಗೆ ವೈವಾಹಿಕ ಕಲಹದಿಂದ ಬೇಸತ್ತು ಹೋಗಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದು, ಇಷ್ಟು ದಿನ ಗುಂಡ್ಲುಪೇಟೆ ತಾಲ್ಲೂಕಿನ ಹರವೆ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಇನ್ನು ಪ್ರಕರಣ ಸುಖಾಂತ್ಯವಾಗಿದ್ದು ಪತಿ ಮನೆಗೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ಹಿನ್ನೆಲೆ: ಗುಂಡ್ಲುಪೇಟೆ ತಾಲ್ಲೂಕಿನ ಕಣ್ಣೆಗಾಲ ಗ್ರಾಮದ ಜ್ಯೋತಿ ಎಂಬಾಕೆ ನಾಲ್ಕು ವರ್ಷಗಳ ಹಿಂದೆ ನಂಜನಗೂಡಿನ ಮಹದೇವಸ್ವಾಮಿ ಎಂಬಾತನೊಂದಿಗೆ ಮದುವೆಯಾಗಿದ್ದು, ದಂಪತಿಗೆ 3 ವರ್ಷ ಹಾಗೂ 3 ತಿಂಗಳ ಎರಡು ಹೆಣ್ಣು ಮಕ್ಕಳಿವೆ.
ಎರಡೇ ಮಕ್ಕಳು ಸಾಕೆಂದು ಪತಿ ಮಹದೇವ ಅವರು ಜ್ಯೋತಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ವೇಳೆ ಆಸ್ಪತ್ರೆಯಿಂದ ಆಕೆ ನಾಪತ್ತೆಯಾಗಿದ್ದರು.
ಹೆತ್ತ ಕಂದನನ್ನು ಬಿಟ್ಟು ರಾತ್ರೋರಾತ್ರಿ ಆಸ್ಪತ್ರೆಯಿಂದ ಹೊರಹೋಗುವ ದೃಶ್ಯ ಆಸ್ಪತ್ರೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಾಪತ್ತೆಯಾಗಿರುವ ಕುರಿತು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗು ಆಕೆಯ ಪತಿ ಚಾಮರಾಜನಗರ ಪಟ್ಟಣ ಪೋಲೀಸ್ ಠಾಣೆಗೆ ದೂರು ನೀಡಿದ್ದರು.