ಶಿವಮೊಗ್ಗ : ದೇವೇಗೌಡರು ಮೈತ್ರಿ ಸರ್ಕಾರ ಕುರಿತಾಗಿ ನೀಡಿರುವ ಹೇಳಿಕೆ ಮತ್ತು ಮಧ್ಯಂತರ ಚುನಾವಣೆ ಬಗ್ಗೆ ಅವರು ಪ್ರಸ್ತಾಪಿಸಿರುವುದರಿಂದ ಸಮ್ಮಿಶ್ರ ಸರ್ಕಾರ ಬೀಳುವ ಸೂಚನೆ ಇದೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿರುವುದು ದೋಸ್ತಿ ಸರ್ಕಾರವಲ್ಲ, ದ್ರೋಹಿಗಳ ಸರ್ಕಾರವಾಗಿದೆ. ಕುಮಾರಸ್ವಾಮಿ ಸಿಎಂ ಆಗಿದಾಗಿನಿಂದಲೂ ಮೈತ್ರಿ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ. ಯಾವುದೇ ಕಾರಣಕ್ಕೂ ಇದು ಮುಂದುವರೆಯುವುದಿಲ್ಲ. ಯಾವುದೇ ಕ್ಷಣದಲ್ಲಿ ಬೀಳಬಹುದು. ಯಾವುದೇ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಬರಬಹುದು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮೈತ್ರಿ ಸರ್ಕಾರದ ಬಗ್ಗೆ ದೇವೇಗೌಡರಿಗೆ ಮಾತ್ರ ಅಸಮಾಧಾನವಿಲ್ಲ. ಇಡೀ ರಾಜ್ಯದ ಜನ ಅಸಮಾಧಾನ ಹೊಂದಿದ್ದಾರೆ. ದೇವೇಗೌಡರಿಗೆ ಈಗ ಜ್ಞಾನೋದಯವಾಗಿದೆ. ಗೌಡರ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಈಶ್ವರಪ್ಪ ತಿಳಿಸಿದ್ದಾರೆ.