ದಲಿತ ಅರ್ಚಕರ ನೇಮಕಕ್ಕೆ ವಿರೋಧ ಇಲ್ಲ: ಸಿಎಂ ಸಿದ್ದರಾಮಯ್ಯ

ಭಾನುವಾರ, 15 ಅಕ್ಟೋಬರ್ 2017 (15:59 IST)
ಮೈಸೂರು: ಕರ್ನಾಟಕದಲ್ಲೂ ಮುಜರಾಯಿ ಇಲಾಖೆಗಳಿಗೆ ದಲಿತ ಅರ್ಚಕರ ನೇಮಕ ಮಾಡಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ದಲಿತ ಅರ್ಚಕರನ್ನು ನೇಮಕ ಮಾಡಲು ನಮ್ಮ ವಿರೋಧ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಶತ್ರುಗಳ ಶತ್ರು ಮಿತ್ರರಾಗಿದ್ದಾರೆ. ನಾನು ನಾಯಕರಲ್ಲಿ ನಂಬಿಕೆ ಇಟ್ಟವನಲ್ಲ. ಬದಲಿಗೆ ಜನರಲ್ಲಿ ನಂಬಿಕೆ ಇಟ್ಟವನು. ಯಾವ ಶತ್ರು ಒಂದಾದರೂ ನನ್ನನ್ನ ಏನೂ ಮಾಡಲು ಸಾಧ್ಯವಿಲ್ಲ. ಶ್ರೀನಿವಾಸ್ ಪ್ರಸಾದ್ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಅವರು ಚುನಾವಣೆಯಲ್ಲಿ ಸೋತು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಚಾಮುಂಡೇಶ್ವರಿ ಉಪಚುನಾವಣೆಯಲ್ಲೂ ಎಲ್ಲರೂ ಒಂದಾಗಿದ್ದರು. ಆಗ ಗೆದ್ದದ್ದು ನಾನೆ ತಾನೆ. ಕಡಿಮೆ ಅಂತರದಲ್ಲಿ ಗೆದ್ದಿರಬಹುದು ಆದ್ರೆ ಗೆಲುವು ಮುಖ್ಯ. ಚಾಮುಂಡೇಶ್ವರಿ ಜನರು ಆಗಲೇ ನನ್ನ ಕೈ ಬಿಡಲಿಲ್ಲ. ಈಗ ನನ್ನನ್ನ ಕೈ ಬಿಡುತ್ತಾರಾ. ಯಾವ ನಾಯಕರ ತಂತ್ರ ರಣತಂತ್ರಗಳಿಗೂ‌ ಜನಾಭಿಪ್ರಾಯ ಬದಲಾಗುವುದಿಲ್ಲ. ಅವರೆಲ್ಲ ಒಂದಾದರೆ ನನಗೇನು ಸಮಸ್ಯೆ ಇಲ್ಲ ಎಂದು ಸಿಎಂ ತಿರುಗೇಟು ನೀಡಿದ್ದಾರೆ.

ಸಮಾಜ ಒಡೆಯುವ ಪರಿವರ್ತನೆ

ಬಿಜೆಪಿಯವರ ಲೆಕ್ಕದಲ್ಲಿ ಪರಿವರ್ತನೆ ಅಂದ್ರೆ ಸಮಾಜದ ಪರಿವರ್ತನೆ ಅಲ್ಲ. ಸಮಾಜ ಒಡೆಯುವ ಪರಿವರ್ತನೆ. ಬಿಜೆಪಿಯವರು ಯಾವಾಗಲಾದರೂ ಮಹಿಳೆಯರ, ರೈತರ ಬಗ್ಗೆ ಮಾತಾನಾಡಿದ್ದಾರ? ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಎಂದರು.

ಬಿಎಸ್ ವೈಗೆ ಹಣಕಾಸು ಜ್ಞಾನವಿಲ್ಲ

ಮೈಸೂರು ಮಿನರಲ್ಸ್ ಲಿಮಿಟೆಡ್ ನಿಂದ ಸಾಲ ಮನ್ನಾದ ಹಣದ‌ ವಿಚಾರಕ್ಕೆ ಸಂಬಂಧಿಸಿದಂತೆ ಅಪೆಕ್ಸ್ ಬ್ಯಾಂಕ್ ಗೆ ನೀಡಿದ್ದಾರೆ ಎನ್ನುವ ಬಿಎಸ್ ವೈ ಹೇಳಿಕೆಗೆ ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ. ಮೈಸೂರು ಮಿನರಲ್ಸ್ ನಲ್ಲಿನ ಹಣ ಸರ್ಕಾರದ್ದು. ತುರ್ತು ಕಾರಣಕ್ಕೆ ಅದನ್ನು ಬಳಸಿದ್ದೇವೆ. ಮುಂದಿನ ಬಜೆಟ್ ನಲ್ಲಿ ಆ ಹಣವನ್ನು ಅವರಿಗೆ ವಾಪಸ್ ನೀಡುತ್ತೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ಸಾಮಾನ್ಯ ಪ್ರಕ್ರಿಯೆ. ಹಣಕಾಸು ವ್ಯವಸ್ಥೆ ಬಗ್ಗೆ ಯಡಿಯೂರಪ್ಪಗೆ ಕನಿಷ್ಠ ಜ್ಞಾನವೂ ಇಲ್ಲ. ಮುಖ್ಯಮಂತ್ರಿ, ಹಣಕಾಸು ಸಚಿವರಾಗಿದ್ದವರಿಗೆ ಈ ಸಾಮಾನ್ಯ ಜ್ಞಾನ ಇರಬೇಕಿತ್ತು ಎಂದು ಹೇಳಿದರು.

ಢೋಂಗಿ ರಾಜಕೀಯ ಬೇಡ

ಮಳೆ ಬರಲು ನಾನು ಕಾರಣಾನಾ? ಮಳೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹಳೆ ಸರ್ಕಾರಗಳು ಬರಿ ತಿಂದು ತೇಗಿ ಹೋಗಿದ್ದಾರೆ. ಮಳೆ ವಿಚಾರದಲ್ಲಿ ಕೆಲಸ ಮಾಡಿರೋದೆ ನಮ್ಮ ಸರ್ಕಾರ. ಬಿಜೆಪಿಯವರು ರಸ್ತೆ ಗುಂಡಿಗಳಿಗೆ ಬಣ್ಣ ಹೊಡೆದು ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಈ ರೀತಿಯ ಢೋಂಗಿ ರಾಜಕೀಯ ಬೇಡ. ನಾನು 1983ರಿಂದಲೂ ಬೆಂಗಳೂರಿನಲ್ಲಿದ್ದೇನೆ. ಅಂದಿನಿಂದಲೂ ಇಷ್ಟು ಪ್ರಮಾಣದ ಮಳೆ ಬಂದಿಲ್ಲ. ಕಳೆದ 60 ದಿನದಲ್ಲಿ 45 ದಿನ ಮಳೆ ಬಂದಿದೆ. ಅದು ಸಹ ಭಾರೀ ಮಳೆ ಬಂದಿದೆ. ಅಂತಹ ಮಳೆಯನ್ನ ನಮ್ಮ ರಾಜಕಾಲುವೆಗಳು ತಡೆಯೊಲ್ಲ. ಹೀಗಾಗಿ ಕೆಲವೆಡೆ ಅನಾಹುತ ಸಂಭವಿಸಿದೆ. ಆದರೆ ಸಮಸ್ಯೆಗಳನ್ನ ನಿಭಾಯಿಸುವಲ್ಲಿ ಸರ್ಕಾರ ಸಮರ್ಥವಾಗಿ ಕೆಲಸ ಮಾಡಿದೆ ಎಂದರು.

ರಾಜಕಾಲುವೆ ಒತ್ತುವರಿಯಾಗಿದ್ರೆ ನಿರ್ದಾಕ್ಷಿಣ್ಯ ಕ್ರಮ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದು. ರಸ್ತೆ ಗುಂಡಿಗಳನ್ನ ಮುಚ್ಚಿದ್ದು ನಮ್ಮ ಸರ್ಕಾರ. ಹಿಂದೆ ಇದ್ದ ಮುಖ್ಯಮಂತ್ರಿ ಏನ್ ಮಾಡಿದ್ರು ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಸಿಎಂ ಪ್ರಶ್ನೆ ಹಾಕಿದ್ದಾರೆ. ಮೈಸೂರು, ಬೆಂಗಳೂರು ಎಲ್ಲೆ ಇರಲಿ ರಾಜಕಾಲುವೆ ಒತ್ತುವರಿಯಾಗಿದ್ರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಮಳೆ ನಿರ್ವಹಣೆಗೆ ಸರ್ಕಾರ ಸಿದ್ಧವಾಗಿದೆ. ಮಳೆ ನಿಂತ ಮೇಲೆ ರಸ್ತೆಗಳ ಗುಂಡಿ ಮುಚ್ಚುತ್ತೇವೆ. ರಾಜಕಾಲುವೆ ಒತ್ತುವರಿ ಅಥವಾ ಕೆರೆ ಒತ್ತುವರಿಯಾಗಿದ್ರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದರು.

ಚಿನ್ನದ ಬಿಸ್ಕರ್ ಕೊಡುವುದು ಗೊತ್ತಿಲ್ಲ

ವಿಧಾನಸೌಧಕ್ಕೆ ವಜ್ರಮಹೋತ್ಸವ ಹಿನ್ನೆಲೆಯಲ್ಲಿ ಶಾಸಕರಿಗೆ ಚಿನ್ನದ ಬಿಸ್ಕತ್ ಗಳನ್ನ ನೀಡುವ ವಿಚಾರ ನನಗೆ ಗೊತ್ತಿಲ್ಲ. ಚಿನ್ನದ ಬಿಸ್ಕತ್ ಕೊಡುವ ವಿಚಾರ ಸ್ಪೀಕರ್ ತೀರ್ಮಾನಿಸುತ್ತಾರೆ. ಅನುದಾನ ಕೊಡುವುದಕ್ಕೆ ಸ್ಪೀಕರ್ ಕಡೆಯಿಂದ ಪ್ರಸ್ತಾವನೆ ಬರಬೇಕು. ಪ್ರಸ್ತಾವನೆ ಬಂದ ನಂತರ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ