ಕೋಲಾರ: ರಾಜಕೀಯ ಕೊನೆಯಾಗುತ್ತಿದೆ ಎಂದರೆ ವಯಸ್ಸಾಗುತ್ತಿದೆ ಎಂದು ಅರ್ಥ. ಸಿಎಂ ಸಿದ್ದರಾಮಯ್ಯ ರಾಜಕೀಯ ಬಿಡುವ ಮಾತೇ ಇಲ್ಲ ಎಂದು ಕೋಲಾರದ ಬಂಗಾಟಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಪರ ಬ್ಯಾಟ್ ಬೀಸಿದರು.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಸ್ಎನ್ ಸಿಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇಷ್ಟು ವರ್ಷ ರಾಜಕಾರಣ ಮಾಡಿದ್ದಾರೆ. ಇನ್ನೂ ಎಷ್ಟು ವರ್ಷ ಮಾಡಲು ಸಾಧ್ಯ ಎಂಬ ದಾಟಿಯಲ್ಲಿ ಹೇಳಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಗಟ್ಟಿಯಾಗಿರುವವರೆಗೂ ಅವರು ರಾಜಕೀಯದಲ್ಲಿ ಬೇಕು. ಅವರು ಜೀವನಪರ್ಯಂತ ನಿವೃತ್ತಿ ಘೋಷಿಸುವ ಮಾತಿಲ್ಲ ಎಂದರು.
ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರವಾಗುತ್ತಾ ಎಂಬ ಮಾಧ್ಯಮದವರ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಈ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಹೈಕಮಾಂಡ್ ಮಾತಿಗೆ ಬದ್ಧರಾಗಿರುತ್ತೇವೆ. ಸದ್ಯಕ್ಕೆ ಮುಖ್ಯಮಂತ್ರಿಗಳ ಕುರ್ಚಿ ಖಾಲಿಯಾಗಿಲ್ಲ. ಸಿದ್ದರಾಮಯ್ಯ ಅವರಲ್ಲಿ ಕುರ್ಚಿ ಬಿಡಿ ಎಂದು ಯಾರೂ ಹೇಳುತ್ತಿಲ್ಲ. ಆದರೆ ವಿರೋಧ ಪಕ್ಷದವರ ಬೊಬ್ಬೆ ಬಿಟ್ಟರೆ, ನಮ್ಮ ಪಕ್ಷದಲ್ಲಿ ಯಾರೂ ಸಹ ಬಿಡಿ ಎಂದು ಹೇಳುತ್ತಿಲ್ಲ ಎಂದು ನುಡಿದರು.
ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾನ 138 ಆಗಿದೆ. ಬಲ ಜಾಸ್ತಿ ಆಗಿದೆ. ಅಧಿಕಾರ ಪ್ರಸ್ತಾಪ ಪಬ್ಲಿಕ್‌ನಲ್ಲಿ ಆಗಿಲ್ಲ, ನಮ್ಮಲ್ಲೂ ಸಹ ಆಗಿಲ್ಲ. ಸಿಎಂ, ಡಿಸಿಎಂ, ಇಬ್ಬರ ನಡುವೆ ಒಪ್ಪಂದಕ್ಕೆ ಬಂದಿರಬಹುದು. ಆದರೆ ಇದರ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲ. ಅವರ ಮನಸ್ಸಿಗೆ ತಕ್ಕಂತೆ ಕೆಲವರು ಮಾತನಾಡಿರಬಹುದು. ಬಹಿರಂಗವಾಗಿ, ಶಾಸಕಾಂಗ ಸಭೆಯಲ್ಲಿ ಇಬ್ಬರು ನಾಯಕರು ಒಪ್ಪಂದ ಆಗಿದೆ ಎಂದು ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.