ಬೆಂಗಳೂರು: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸರ್ವೇಯಲ್ಲಿ ಕ್ರಿಶ್ಚಿಯನ್‌ರಲ್ಲಿ ಹಲವಾರು ಜಾತಿಗಳನ್ನು ಸೇರಿಸಿದ್ದು ಸರಿಯಲ್ಲ. ಇದು ಗೊಂದಲಕ್ಕೆ ಎಡೆ ಮಾಡಿಕೊಡಲಿದೆ ಎಂದು ಸಂಸದ ಯದುವೀರ್ ಒಡೆಯರ್ ಅವರು ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ವತಿಯಿಂದ ಇಂದು ದುಂಡು ಮೇಜಿನ ಸಭೆ ನಡೆಸಲಾಯಿತು. ಬಳಿಕ ನಿಯೋಗವು ಘನತೆವೆತ್ತ ರಾಜ್ಯಪಾಲರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಸೇರಿದಂತೆ ಕ್ರಿಶ್ಚಿಯನ್ನರಲ್ಲಿ 46 ಜಾತಿಗಳನ್ನು ಸೇರಿಸಿದ್ದಾರೆ. ಇದರ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು. ಇದರಿಂದ ಮತಾಂತರಕ್ಕೆ ಅವಕಾಶ ಆಗಲಿದೆ ಎಂದು ಹೇಳಿದರು.
ಇಲ್ಲದ ಜಾತಿಗಳನ್ನು ಸಮೀಕ್ಷೆ ವೇಳೆ ತೆಗೆದುಹಾಕುವ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಸಮೀಕ್ಷೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಮನವಿ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮಾನ್ಯ ರಾಜ್ಯಪಾಲರು ತಿಳಿಸಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕ್ರಿಶ್ಚಿಯನ್ನರಲ್ಲಿ ಇಲ್ಲದ ಜಾತಿಗಳನ್ನು ಸಮೀಕ್ಷೆ ವೇಳೆ ಹೊರಗಿಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳದೆ ಇದ್ದಲ್ಲಿ ಕಾನೂನಿನ ಮೊರೆ ಹೋಗಲಿದ್ದೇವೆ. ಜೊತೆಗೆ ಆಂದೋಲನವನ್ನೂ ಮಾಡಲಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಈ ಸಂಬಂಧ ಮುಖಂಡರು ಮತ್ತು ವಿವಿಧ ಜಾತಿಯ ಮುಖ್ಯಸ್ಥರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.