ಇದು ಮಂಗಳಮುಖಿಯ ಉದಾರತೆ ಕಥೆ

ಮಂಗಳವಾರ, 25 ಅಕ್ಟೋಬರ್ 2016 (16:37 IST)
ತುಮಕೂರು: ಒಂದು ಗೇಣು ಜಾಗಕ್ಕೆ ಬಂಗಾರದ ಬೆಲೆ ಇರುವ ಇಂದಿನ ದಿನಗಳಲ್ಲಿ, ಮಾರುದ್ದ ಜಾಗಕ್ಕೆ ಜಗಳ, ಕೊಲೆಯಾಗುವ ಪ್ರಸ್ತುತ ಸಂದರ್ಭದಲ್ಲಿ ಮಂಗಳಮುಖಿಯೊಬ್ಬರು ತನ್ನ ಸ್ವಂತ ಸೈಟ್ ನ್ನೇ ಮನೆಗೆಲಸದಾಕೆಗೆ ದಾನ ಮಾಡಿ ಉದಾರತೆ ಮೆರೆದಿದ್ದಾರೆ.
 

 
ನಗರದ ಶೆಟ್ಟಿಹಳ್ಳಿ ನಿವಾಸಿಯಾದ ದೀಪಿಕಾ ಮಂಗಳಮುಖಿಯಾದರೂ ಸಮಾಜದಲ್ಲಿ ದೊಡ್ಡ ಹೆಸರು ಪಡೆದುಕೊಂಡಿದ್ದಾರೆ. ಇವರ ದಾನ-ಧರ್ಮದ ಕಾರ್ಯಗಳು ಹಾಗೂ ಸಮಾಜ ಸೇವೆ ಜನಪ್ರತಿನಿಧಿಯನ್ನೂ ತಲೆ ಕೆಳಗೆ ಹಾಕುವಂತೆ ಮಾಡುತ್ತದೆ. ಇದ್ದಷ್ಟು ಸಾಕಾಗುವುದಿಲ್ಲ ಎನ್ನುತ್ತ ಬೇಕು ಬೇಕೆಂದು ಹಪಹಪಿಸುವ ಮಂದಿಗೆ ದೀಪಿಕಾ ಮಾದರಿಯಾಗಿದ್ದಾರೆ. ತಾನು ಕಷ್ಟುಪಟ್ಟು ಸಂಪಾದಿಸಿ ಖರೀದಿಸಿದ( 40/15) ಅಡಿ ಅಳತೆಯ ಸೈಟನ್ನು ತಮ್ಮ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಗೌರಮ್ಮ ಮತ್ತು ನಾಗರಾಜು ಕುಟುಂಬಕ್ಕೆ ದಾನವಾಗಿ ನೀಡಿದ್ದಾರೆ.
 
ಗೌರಮ್ಮರದು ಮೂರು ಮಕ್ಕಳ ಕುಟುಂಬ. ಮಕ್ಕಳನ್ನು ಶಾಲೆಗೆ ಕಳುಹಿಸಿ ಓದಲಾಗದ ಬಡತನ. ಇದರಿಂದಾಗಿ ಒಬ್ಬಾತನ ಶಾಲೆಯನ್ನು ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸಿದ್ದರು. ಮನೆ ಬಾಡಿಗೆಯನ್ನು ಸಹ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ. ಗೌರಮ್ಮರ ನೋವನ್ನು ಪ್ರತಿದಿನ ನೋಡುತ್ತಿದ್ದ ದೀಪಿಕಾ, ಅವರ ಕಷ್ಟಕ್ಕೆ ಹೆಗಲಾಗಿ ದಾನು ಖರೀದಿಸಿದ ಸೈಟನ್ನು ದಾನವಾಗಿ ಕೊಟ್ಟಿದ್ದಾರೆ.
 
ಅಷ್ಟೇ ಅಲ್ಲ, ಆ ಸೈಟನಲ್ಲಿ ಮನೆಯನ್ನೂ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ದೀಪಿಕಾ ಅವರ ಸಹಾಯದಿಂದ ಗೌರಮ್ಮರ ಬದುಕು ಈಗ ಹಸನಾಗುವ ಕಾಲ ಸನ್ನಿಹಿತವಾಗಿದೆ. ದೀಪಿಕಾ ಕೈ ಹಿಡಿಯದಿದ್ದರೆ ಕುಟುಂಬವೇ ಬೀದಿಗೆ ಬೀಳುತ್ತಿತ್ತು. ನಮ್ಮ ಪಾಲಿಗೆ ದೇವರಂತೆ ಬಂದು ದೀಪಿಕಾ ಅವರು ಕೈ ಹಿಡಿದಿದ್ದಾರೆ ಎಂದು ಗೌರಮ್ಮ ಕಣ್ತುಂಬಿಸಿಕೊಂಡು ಹೇಳುತ್ತಾರೆ.
 
ಮಂಗಳಮುಖಿ ಎಂದರೆ ಕೀಳಾಗಿ ನೋಡುವ ಸಮಾಜಕ್ಕೆ ಹಾಗೂ ಕೆಲವು ಮಂಗಳಮುಖಿಯರಿಗೆ ದೀಪಿಕಾ ನಿಜಕ್ಕೂ ಆದರ್ಶನೀಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ