ಈ ಬಾರಿಯೂ ಸರಳ ದಸರಾ ಆಚರಣೆ; 6 ಕೋಟಿ ರೂ. ಬಿಡುಗಡೆ

ಶನಿವಾರ, 4 ಸೆಪ್ಟಂಬರ್ 2021 (13:15 IST)
ಮೈಸೂರು, ಸೆ 4: ಕೊರೊನಾ ಸೋಂಕಿನ ಕಾರಣದಿಂದ ಕಳೆದ ವರ್ಷದಂತೆ ಈ ಬಾರಿಯೂ ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ದಸರಾ ಸಮಿತಿ ಸಭೆಯಲ್ಲಿ ಸರಳ ಮೈಸೂರು ದಸರಾ ಆಚರಣೆಗೆ ನಿರ್ಧಾರ ಮಾಡಲಾಯಿತು. ಇದಕ್ಕಾಗಿ 6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. "ಸೆ.20ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಕೋವಿಡ್ ಪರಿಸ್ಥಿತಿ ನೋಡಿ ಕಾರ್ಯಕ್ರಮಗಳನ್ನು ನಿಗದಿ ಮಾಡಲಾಗುತ್ತದೆ," ಎಂದು ಬೆಂಗಳೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ಉನ್ನತ ಮಟ್ಟದ ದಸರಾ ಸಮಿತಿ ಸಭೆಯ ನಂತರ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, "ಕಳೆದ ಬಾರಿ ಸಾಂಪ್ರದಾಯಿಕ ಹಾಗೂ ಸರಳ ದಸರಾ ಆಚರಣೆ ಮಾಡಲಾಗಿತ್ತು. ಈ ವರ್ಷವೂ ಹಾಗೆಯೇ ಮಾಡಲಾಗುವುದೆಂದು ತೀರ್ಮಾನಿಸಲಾಗಿದೆ," ಎಂದು ಹೇಳಿದರು.
"ದಸರಾ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಚಟುವಟಿಕೆಗಳು ನಡೆಯುತ್ತಿತ್ತು. ಈಗ ದಸರಾ ಸರಳ ಆಚರಣೆ ಮಾಡಿದ್ದರಿಂದ ಅವರ ಆರ್ಥಿಕ ಚಟುವಟಿಕೆ ಹೊಡೆತ ಬಿದ್ದಿದೆ. ಇದರಿಂದ ಅವರಿಗೆ ಪಾರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು," ಎಂದರು.
"ದಸರಾ ಆಚರಣೆಗೆ ಕಳೆದ ಬಾರಿಯ 8 ಕೋಟಿ ಬಾಕಿ ಹಣ ಉಳಿದಿದ್ದು, ಹೊಸದಾಗಿ 6 ಕೊಟಿ ರೂ. ಬಿಡುಗಡೆ ಮಾಡಲಾಗಿದೆ. ಮಾಡಿರುವ ವೆಚ್ಚದ ಲೆಕ್ಕ ತಕ್ಷಣ ಕೊಡಬೇಕು. ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂದು ಮುಂದಿನ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ," ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
"ಅರಮನೆ ಆವರಣದ ಒಳಗೆ ಜಂಬೂ ಸವಾರಿ ಮಾಡಲಾಗುವುದು. ಚಾಮರಾಜನಗರ ಹಾಗೂ ಶ್ರೀರಂಗಪಟ್ಟಣ ದಸರಾ ಆಚರಣೆಯ ಬಗ್ಗೆಯೂ ಚರ್ಚೆಯಾಗಿದೆ," ಎಂದು ಸಿಎಂ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ