ಸಂಕಷ್ಟ ಸಮಯದಲ್ಲಿ ಸಿಎಂ ಬದಲಾವಣೆ ದುರ್ದೈವ: ಸಿದ್ದರಾಮಯ್ಯ

ಸೋಮವಾರ, 26 ಜುಲೈ 2021 (21:54 IST)

ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಹೆದರಿಸಿ ರಾಜೀನಾಮೆ ಕೊಡಿಸಲಾಗಿದೆ. ಇನ್ನೂ 15 ದಿವಸ ಬಿಟ್ಟು ಸಿಎಂ ಅವರನ್ನ ತಗೆಬಹುದಿತ್ತು. ಅಷ್ಟು ಅವಸರದಲ್ಲಿ ತೆಗೆಯುವ ಅವಶ್ಯಕತೆ ಏನಿತ್ತು ಅನ್ನೋದು ಗೊತ್ತಾಗುತ್ತಿಲ್ಲ ಎಂದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತಗೆಯುವುದು ಖಚಿತ ಅಂದರೆ ಇನ್ನೊಂದು ವಾರ, 15 ದಿನ ಬಿಟ್ಟು ತೆಗೆಯಬಹುದಿತ್ತು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆ ಆದ ಮೇಲೆ ತೆಗೆಯಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಬಾದಾಮಿಯಲ್ಲಿ ಬೆಳೆ ಹಾನಿ ನೋಡಿಕೊಂಡು ಬಂದೆ. ನಾಳೆ ಖಾನಾಪುರ, ಬೆಳಗಾವಿ ಗ್ರಾಮೀಣ, ಯಮಕನಮರಡಿ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದೇನೆ. ಬಾದಾಮಿಯಲ್ಲಿ ಮನೆಗೆ ನೀರು ನುಗ್ಗಿಲ್ಲ. ಆದರೆ ಜಮೀನಿಗೆ ನೀರು ನುಗ್ಗಿ ಬಹಳಷ್ಟು ಹಾನಿ ಆಗಿದೆ. ಕಳೆದ ವರ್ಷವೇ ಪರಿಹಾರ ಸರಿಯಾಗಿ ಕೊಟ್ಟಿಲ್ಲ. 2019ರಲ್ಲಿ ಬಿದ್ದ ಮನೆಗಳಿಗೆ ಪರಿಹಾರ ಕೊಟ್ಟಿಲ್ಲ. ಈಗಲಾದರೂ ಸರ್ಕಾರ 2019, ಈಗಿನ ಪರಿಹಾರ ಕೊಡಬೇಕು ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಮೀನಾಮೇಷ ಮಾಡದೇ ಪರಿಹಾರ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಠಿಕಾಣಿ ಹೂಡಬೇಕು. ಪ್ರತಿನಿತ್ಯ ಜಿಲ್ಲೆಯಲ್ಲಿ ಏನು ಆಗ್ತಿದೆ ಅನ್ನೋದನ್ನ ನೋಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಬಂದಿಲ್ಲ ಅಂತಾ ಹೇಳೋದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಯಡಿಯೂರಪ್ಪ ಏನು ಶೋಕಿ ಮಾಡಲಿಕ್ಕೆ ಬಂದಿದ್ರಾ? ಕತ್ತಿ, ಸವದಿ, ಕಾರಜೋಳ, ಆರ್.ಅಶೋಕ್ ಅವರನ್ನೆಲ್ಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಅಂದ ಮೇಲೆ ಏಕೆ ಬಂದ್ರಿ ಅಂತಾ ಕೇಳಬೇಕಿತ್ತು. ಪಾಪ ಸಿಎಂ ಬಿಎಸ್‌ವೈ ಇವತ್ತು ಹೋಗ್ತಿದ್ದರಲ್ಲ ಅದಕ್ಕೆ ನಿನ್ನೆ ಕಾಟಾಚಾರಕ್ಕೆ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ