'ಸಮರ್ಥ ಆಡಳಿತವೇ ಆಗಿದ್ದರೆ ಈ 'ಪದಚ್ಯುತಿ' ಮಾಡಿದ್ದೇಕೆ?

ಸೋಮವಾರ, 26 ಜುಲೈ 2021 (13:58 IST)
ಬೆಂಗಳೂರು(ಜು.26): ಎರಡು ವರ್ಷಗಳ ಅಧಿಕಾರ ನಡೆಸಿರುವ ಬಿಎಸ್ವೈ, ಸಾಧನಾ ಸಮಾವೇಶದಲ್ಲಿ ವಿದಾಯ ಭಾಷಣ ನೀಡಿ ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಕಳೆದ ಕೆಲ ಸಮದಿಂದ ಎದ್ದಿದ್ದ ಎಲ್ಲಾ ರಾಜಕೀಯ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೀಗ ಅವರ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಟ್ವಿಟರ್ ಮೂಲಕ ಸರಣಿ ಪ್ರಶ್ನೆಗಳನ್ನೆಸೆದಿದ್ದು, ಯಡಿಯೂರಪ್ಪ ಹಾಗೂ ಬಿಜೆಪಿಯ ಕಾಲೆಳೆದಿದೆ.

* ಬಿಎಸ್ವೈ ರಾಜೀನಾಮೆ ಬೆನ್ನಲ್ಲೇ ಮತ್ತೆ ಗರಿಗೆದರಿದ ರಾಜಕೀಯ
* ವಿದಾಯ ಭಾಷಣದಲ್ಲಿ ಯಡಿಯೂರಪ್ಪ ಕಣ್ಣೀರು, ಪದಚ್ಯತಿ ಮಾಡಿದ್ದೇಕೆ? ಎಂದ ಕಾಂಗ್ರೆಸ್
* ಟ್ವಿಟರ್ನಲ್ಲಿ ಬಿಎಸ್ವೈಗೆ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆ

ಹೌದು ಬಿಎಸ್ವೈ ರಾಜೀನಾಮೆ ಘೋಷಣೆ, ಅವರ ಬೆಂಬಲಿಗರಿಗೆ ಆಘಾತ ನೀಡಿದೆ. ವಿದಾಯ ಭಾಷಣದಲ್ಲಿ ಭಾವುಕರಾಗಿ ಮಾತನಾಡಿದ ಬಿಎಸ್ವೈ ಕಣ್ಣೀರಿಡುತ್ತಾ ತಾವು ರಾಜೀನಾಮೆ ನೀಡುವ ತೀರ್ಮಾನ ಮಾಡಿರುವುದಾಗಿ ಘೋಷಿಸಿದ್ದಾರೆ. ತದನಂತರ ರಾಜಭವನಕ್ಕೆ ತೆರಳಿ ರಾಜೀನಾಮೆಯನ್ನೂ ಸಲ್ಲಿಸಿದ್ದಾರೆ. ಅಲ್ಲದೇ ಇನ್ಮುಂದೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ, ಸಕ್ರಿಯ ರಾಜಕಾರಣದಲ್ಲೇ ಇರುತ್ತೇನೆ ಎನ್ನುವ ಮೂಲಕ ರಾಜ್ಯಪಾಲರಾಗುವುದಿಲ್ಲ ಎಂಬುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಅತ್ತ ಕಾಂಗ್ರೆಸ್ ಟ್ವಿಟರ್ನಲ್ಲಿ ಬಿಎಸ್ವೈಗೆ ಪ್ರಶ್ನೆಗಳ ಮಳೆ ಸುರಿದಿದೆ. ರಾಜೀನಾಮೆ ನೀಡುವ ಬಗ್ಗೆ ಘೋಷಣೆ ಮಾಡಿದ ಬಿಎಸ್ವೈ ಕಣ್ಣೀರು ಸುರಿಸಿದ್ದರು. ಆದರೆ ತಾವು ದುಃಖದಿಂದ ಅಲ್ಲ, ಖುಷಿಯಿಂದಲೇ ಈ ನಿರ್ಧಾರ ತೆಗೆದುಕೊಮಡಿದ್ದೇನೆ ಎಂದಿದ್ದರು. ಇದೇ ವಿಚಾರವಾಗಿ ಕಾಲೆಳೆದಿರುವ ಕಾಂಗ್ರೆಸ್ 'ಇದು 'ಪದತ್ಯಾಗ' ಅಲ್ಲ, 'ಪದಚ್ಯುತಿ' ಎನ್ನುವುದನ್ನು ಕಣ್ಣೀರು ಹೇಳುತ್ತಿದ್ದವು' ಎಂದಿದೆ. ಇದೇ ವೇಳೆ ಬಿಎಸ್ವೈ ವಿಫಲಗೊಂಡಿದ್ದಾರೆಂದಿರುವ ಕಾಂಗ್ರೆಸ್ 'ತಮ್ಮದು ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎನ್ನುವುದನ್ನು ಯಡಿಯೂರಪ್ಪ ಅವರು ರಾಜೀನಾಮೆ ಘೋಷಣೆ ಮಾಡುವ ಮೂಲಕ ಒಪ್ಪಿಕೊಂಡಂತಾಗಿದೆ. ಅವರೇ ಹೇಳಿಕೊಳ್ಳುವಂತೆ ಸಮರ್ಥ ಆಡಳಿತವೇ ಆಗಿದ್ದಿದ್ದರೆ ಈ 'ಪದಚ್ಯುತಿ' ಮಾಡಿದ್ದೇಕೆ? ಎಂದೂ ಪ್ರಶ್ನಿಸಿದೆ.
ಇನ್ನು ತಮ್ಮ ಮುಂದಿನ ಟ್ವೀಟ್ನಲ್ಲಿ ಸರ್ಕಾರ ಬದಲಾವಣೆ ಬಗ್ಗೆ ಉಲ್ಲೇಖಿಸಿರುವ ಕಾಂಗ್ರೆಸ್ ಬಿಜೆಪಿಯ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಬಯಸುತ್ತಿರುವುದು "ನಾಯಕತ್ವ ಬದಲಾವಣೆ" ಅಲ್ಲ "ಸರ್ಕಾರದ ಬದಲಾವಣೆ". ಬಿಜೆಪಿ ತಾಕತ್ತಿದ್ದರೆ, ನೈತಿಕತೆಯಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ, ರಾಜ್ಯವನ್ನು ಯಾರು ಆಳಬೇಕು ಎನ್ನುವುದನ್ನು ಜನರೇ ನಿರ್ಧರಿಸಲಿ ಎಂದೂ ಸವಾಲೆಸೆದಿದೆ.
ಇನ್ನು ರಾಜೀನಾಮೆ ಹಿಂದಿನ ಕಾರಣದ ಬಗ್ಗೆ ಬಿಎಸ್ವೈಗೆ ಪ್ರಶ್ನೆ ಎಸೆದಿರುವ ಕಾಂಗ್ರೆಸ್ 'ವೈಫಲ್ಯಕ್ಕಾಗಿಯೇ? ಒತ್ತಡಕ್ಕಾಗಿಯೇ? ಅಸಹಕಾರಕ್ಕಾಗಿಯೇ? ಬೆದರಿಕೆಗಾಗಿಯೇ?ೆಬ್ಲಾಕ್ಮೇಲ್ಗಾಗಿಯೇ? ಯಾವ ಕಾರಣಕ್ಕಾಗಿ ಕಣ್ಣೀರಿನೊಂದಿಗೆ ರಾಜೀನಾಮೆ ನೀಡಿದ್ದು ಎನ್ನುವುದನ್ನ ರಾಜ್ಯದ ಜನತೆಗೆ ತಿಳಿಸುವಿರಾ ಯಡಿಯೂರಪ್ಪರವರೇ? ಸಮರ್ಪಕ ಆಡಳಿತ ನಡೆಸಲು ನಿಮಗೆ ಯೋಗ್ಯತೆ ಒದಗಿಬರುವುದು ಯಾವಾಗ ಹೇಳುವಿರಾ ಬಿಜೆಪಿ? ಎಂದೂ ಪ್ರಶ್ನಿಸಿದೆ.
ಇನ್ನು ಅತ್ತ ಬಿಎಸ್ವೈ ಬೆಂಲಲಿಗರಿಗೆ ಈ ನಡೆ ಭಾರೀ ಆಘಾತ ಕೊಟ್ಟಿದೆ. ಅವರ ಕಾರು ಚಾಲಕನೂ ಕಣ್ಣೀರು ಸುರಿಸಿದ್ದಾಋಎ. ಇನ್ನು ಬಿಎಸ್ವೈ ಆಪ್ತರಲ್ಲೊಬ್ಬರಾದ ಹೊನ್ನಾಳಿ ಶಾಸಕ, ರೇಣುಕಾಚಾರ್ಯ ಈ ರಾಜೀನಾಮೆ ಘೋಷಣೆ ಬೆನ್ನಲ್ಲೇ ನನ್ನ ರಾಜಕೀಯ ಜೀವನದಲ್ಲೇ ಅತ್ಯಂತ ದುಃಖದ ದಿನ ಎಂದು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಒಟ್ಟಾರೆಯಾಗಿ ಬಿಎಸ್ವೈ ರಾಜೀನಾಮೆ ಘೋಷಣೆ ಬೆನ್ನಲ್ಲೇ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಬಿಎಸ್ವೈ ವಿರೋಧಿ ಬಣಕ್ಕೆ ಈ ನಡೆ ಖುಷಿ ಕೊಟ್ಟಿದ್ದರೆ, ಇತ್ತ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವ ಹಾದಿ ಹುಡುಕುತ್ತಿದೆ. ಇವೆಲ್ಲದರ ನಡುವೆ ಬಿಎಸ್ವೈ ಬೆಂಬಲಿಗರು ಮಾತ್ರ ಮುಂದೇನು ಎಂದು ತಿಳಿಯದೇ ಗೊಂದಲದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ