‘ಸೇವ್ ದಿ ಚಿಲ್ಡ್ರನ್’ ಎನ್­ಜಿಒ ಒದಗಿಸಿರುವ ಮೂರು ಮಿನಿ ಬಸ್­ಗಳು

ಶುಕ್ರವಾರ, 22 ಅಕ್ಟೋಬರ್ 2021 (19:03 IST)
ವಲಸಿಗರು, ಕೊಳೆಗೇರಿ ಪ್ರದೇಶಗಳ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಜೊತೆಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರಳುವಂತೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಸರ್ಕಾರೇತರ ಸಂಸ್ಥೆ ‘ಸೇವ್ ದಿ ಚಿಲ್ಡ್ರನ್’ ಒದಗಿಸಿರುವ ‘ಮಕ್ಕಳ ಸ್ನೇಹಿ ಸಂಚಾರಿ ಕಲಿಕಾ ಕೇಂದ್ರ’ಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ ನಾಗೇಶ್ ಅವರು ಇಂದು ವಿಧಾನಸೌಧ ಆವರಣದಲ್ಲಿ ಉದ್ಘಾಟಿಸಿ ಹಸಿರು ನಿಶಾನೆ ತೋರಿದರು. 
 
  
 
‘ಬೇರೆ ಬೇರೆ ಕಾರಣಗಳಿಂದ ಮಕ್ಕಳು ಶಾಲೆಗಳಿಂದ ಹೊರಗುಳಿದಿರುತ್ತಾರೆ. ಅಂತಹ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಬೇಕು. ವಲಸಿಗರ ಮಕ್ಕಳಿಗೆ ಸಾಧ್ಯವಾದಷ್ಟು ಅಕ್ಷರ ಜ್ಞಾನ ನೀಡಲು ಅವರಿದ್ದಲ್ಲಿಗೆ ತೆರಳಿ ಕಲಿಕಾ ಸಾಮಗ್ರಿ ಒದಗಿಸಿ ಅಕ್ಷರ ಜ್ಞಾನ ನೀಡುವ ಪ್ರಯತ್ನವನ್ನು ಸೇವ್ ದಿ ಚಿಲ್ಡ್ರನ್ ಮಾಡುತ್ತಿದೆ. ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯ ಸೇರಿದಂತೆ ಇನ್ನಿತರ ಆರೋಗ್ಯ ವಿಚಾರಗಳ ಕುರಿತಾಗಿಯು ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ. ಮಕ್ಕಳ ಶಿಕ್ಷಣ ವಿಚಾರದಲ್ಲಿ ಸರಕಾರದ ಜೊತೆಗೆ ಸಂಘ-ಸಂಸ್ಥೆಗಳು ನೆರವಾಗುತ್ತಿರುವುದು ಶ್ಲಾಘನೀಯ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. 
 
  
 
‘ಸೇವ್ ದಿ ಚಿಲ್ಡ್ರನ್­ನ ಮಿನಿ ಬಸ್­­ಗಳಲ್ಲಿ ಪುಸ್ತಕಗಳು, ಕತೆ ಪುಸ್ತಕಗಳು, ನೋಟ್ ಬುಕ್, ಗಣಿತ, ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಗಳ ಕಲಿಕಾ ಸಾಮಗ್ರಿಗಳು ಇರುತ್ತವೆ. ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಕೂಡ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಗಳ ಅಭಿವೃದ್ಧಿ ಕಾರ್ಯದಲ್ಲಿ ಸರಕಾರದ ಜೊತೆ ಕೈ ಜೋಡಿಸುತ್ತೇವೆ ಎಂದು ಸೇವ್ ದಿ ಚಿಲ್ಡ್ರನ್ ಪ್ರತಿನಿಧಿಗಳು ತಿಳಿಸಿದ್ದಾರೆ. ಸರಕಾರದಿಂದ ಅಗತ್ಯ ಸಹಕಾರ ನೀಡಲಾಗುತ್ತದೆ’ ಎಂದು ಸಚಿವರು ನುಡಿದರು. 
 
 
ಬಡವರು, ಕೊಳೆಗೇರಿ ಮಕ್ಕಳು ನೆಲೆಸಿರುವ ನಗರದ 30 ಪ್ರದೇಶಗಳಿಗೆ ತೆರಳುವ ಈ ಮೂರು ಮಿನಿ ಬಸ್­ಗಳು ಮಕ್ಕಳ ವ್ಯಾಸಂಗಕ್ಕೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಒದಗಿಸಿ ಅಕ್ಷರಜ್ಞಾನ ನೀಡಲಿವೆ. 
 
  
 
ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್, ಶಾಸಕರಾದ ಹರೀಶ್ ಪೂಂಜಾ, ಸೇವ್ ದಿ ಚಿಲ್ಡ್ರನ್­ನ ಅಂಗಸಂಸ್ಥೆಯಾದ ‘ಸಾಮೂಹಿಕ ಶಕ್ತಿ’ಯ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಲಕ್ಷ್ಮೀ ಪಟ್ಟಾಭಿರಾಮನ್, ಸೇವ್ ದಿ ಚಿಲ್ಡ್ರನ್ ಸಂಸ್ಥೆಯ ಸಿಇಒ ಸುದರ್ಶನ್ ಸುಚಿ ಸೇರಿದಂತೆ ಸಂಸ್ಥೆಯ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. 
 
  
 
nagesh
 
ತರಗತಿಗಳಲ್ಲಿ ಹಾಜರಾತಿ ಹೆಚ್ಚುತ್ತಿದೆ: ಬಿ.ಸಿ ನಾಗೇಶ್. 
 
ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ ಕಾಣುತ್ತಿದೆ. ಬಿಸಿಯೂಟ ಕೂಡ ಆರಂಭವಾಗಿರುವುದರಿಂದ ಇನ್ನು ಮುಂದೆ ಮಕ್ಕಳ ಹಾಜರಾತಿ ಮತಷ್ಟು ಹೆಚ್ಚಲಿದೆ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು. 
 
ಮಕ್ಕಳ ಹಾಜರಾತಿ ಮತ್ತು ಬಿಸಿಯೂಟ ಪುನಾರಂಭದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಶಾಲೆಗಳಿಗೆ ಮಕ್ಕಳು ಉತ್ಸಾಹದಿಂದ ಬರುತ್ತಿದ್ದಾರೆ. ಜಿಲ್ಲೆ, ತಾಲೂಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗೆ ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಅ.21ರಿಂದ ಬಿಸಿಯೂಟ ಆರಂಭಿಸಿರುವ ಕಾರಣ ಹಾಜರಾತಿ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ವಿಶ್ವಾಸವಿದೆ. ಅ.25ರಿಂದ 1 ರಿಂದ 5ನೇ ತರಗತಿಗಳ ಪುನಾರಂಭ ಹಾಗೂ ನವೆಂಬರ್ ಮೊದಲ ವಾರದಲ್ಲಿ ಎಲ್ಲ ತರಗತಿಗಳಿಗೆ ಬಿಸಿಯೂಟ ನೀಡಲಾಗುತ್ತದೆ. ಇದರಿಂದ ಹಾಜರಾತಿ ಮತ್ತಷ್ಟು ಸುಧಾರಣೆಯಾಗುವ ವಿಶ್ವಾಸವಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವಾಪಸ್ ತರಗತಿಗಳಿಗೆ ಕರೆತರುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮುಂದುವರೆಸಿದೆ’ ಎಂದು ಸಚಿವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ