ರೈಲಿನ ಹೆಸರು ಬದಲಾವಣೆ ಮಾಡಿ ಒಡೆಯರ್ ಹೆಸರು ಇಡಲಾಗಿದೆ. ಈ ನಿರ್ಧಾರವನ್ನು ಎಲ್ಲರೂ ಸ್ವಾಗತ ಮಾಡಿದ್ದಾರೆ. ಆದರೆ ರೈಲಿನ ಹೆಸರನ್ನು ಬದಲಾವಣೆ ಮಾಡಿದ್ದಕ್ಕೆ ಕಾಂಗ್ರೆಸ್ನವರು ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಓಡಾಡುವವರ ಮನಸ್ಸಿನಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಿಸಬೇಕು ಎಂಬ ಬೇಗುದಿ ಇತ್ತು. ಅದರಂತೆ ಕರ್ನಾಟಕಕ್ಕೆ ಮೊದಲು ಮೀಸಲಾತಿ ತಂದುಕೊಟ್ಟ, ನಾಡು ಕಟ್ಟಿದ ಒಡೆಯರ್ ಹೆಸರಿಡಲಾಗಿದೆ. ಸಿದ್ದರಾಮಯ್ಯ ಅವರಿಗೆ ಅದ್ಯಾಕೆ ಒಡೆಯರ್ ಹೆಸರು ಬೇಸರ ತರಿಸಿತೋ ಗೊತ್ತಿಲ್ಲ. ಒಡೆಯರ್ ಹೆಸರಿಟ್ಟಿರೋದಕ್ಕೆ ನಾಡಿನ ಎಲ್ಲರೂ ಸ್ವಾಗತ ಕೋರಿದ್ದಾರೆ. ಆದರೆ ಕೆಲವು ಕಾಂಗ್ರೆಸ್ನವರು ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದರು.
ರೈಲಿಗೆ ಟಿಪ್ಪು ಹೆಸರು ತೆಗೆದುಹಾಕಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಒಡೆಯರ್ ಅವರ ಕೊಡುಗೆ ಈ ರಾಜ್ಯದಲ್ಲಿ ಅಪಾರವಿದೆ. ಶ್ರೇಷ್ಠ ಅಭಿವೃದ್ಧಿ ಹರಿಕಾರರು ಒಡೆಯರ್ ಅವರಾಗಿದ್ದಾರೆ. ಮೋದಿಯವರು ಈಗ ಏನು ಮಾಡುತ್ತಿದ್ದಾರೋ ಅದನ್ನು ಒಡೆಯರ್ ಅವರು ಆಗಿನ ಕಾಲದಲ್ಲಿ ಮಾಡಿದ್ದಾರೆ. ಸದ್ಯ ರೈಲನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಕರೆಯುತ್ತಾರೆ ಎಂದು ಹೇಳುವ ಮೂಲಕ ಹೆಸರು ಬದಲಾವಣೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ ಟಿಪ್ಪು ಹೆಸರೇ ಗೊಂದಲದಲ್ಲಿದೆ, ಚರ್ಚೆಯಲ್ಲಿದೆ. ಅವನ ಸಾಧನೆಗಳು ಚರ್ಚೆಯಲ್ಲಿವೆ. ಹಾಗಾಗಿ ಚರ್ಚೆಯಲ್ಲಿ ಇರುವರ ಹೆಸರು ಸರಿಯಲ್ಲ ಎಂದು ಹೇಳಿದರು.