ಯಾದಗಿರಿ : ನಗರದ ಹತ್ತಿಕುಣಿ ಸರ್ಕಲ್ ಬಳಿ ಇರುವ ವಿವಾದಿತ ಟಿಪ್ಪು ಸರ್ಕಲ್ ವಿವಾದ ತೀವ್ರ ಜಟಾಪಟಿಗೆ ಕಾರಣವಾಗಿದ್ದು, ಎರಡು ಕೋಮುಗಳ ನಡುವಿನ ಸಾಮರಸ್ಯಕ್ಕೆ ಕೊಳ್ಳಿ ಇಟ್ಟಿದೆ.
ಇಂದು ಶಿವಾಜಿ ಸಂಘಟನೆಯಿಂದ ಸರ್ಕಲ್ ತೆರವುಗೊಳಿಸೋದಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಂಘರ್ಷದ ಮುನ್ಸೂಚನೆ ಅರಿತ ಪೊಲೀಸರು ತೀವ್ರ ನಿಗಾವಹಿಸಿದ್ದು, 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಯಾದಗಿರಿ ನಗರದಲ್ಲೀಗ ಟಿಪ್ಪು ಸರ್ಕಲ್ ವಿವಾದ ಶುರುವಾಗಿದ್ದು, ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ನಗರದ ಹತ್ತಿಕುಣಿ ರಸ್ತೆ ಬಳಿ 2010ರಲ್ಲಿ ನಿರ್ಮಾಣವಾಗಿರುವ ಟಿಪ್ಪು ಸರ್ಕಲ್ ಅನಧಿಕೃತವಾಗಿದೆ ಅಂತಾ ಜೈ ಶಿವಾಜಿ ಸಂಘಟನೆ ಆರೋಪಿಸಿದೆ. ಅನಧಿಕೃತವಾಗಿ ನಿರ್ಮಾಣ ಮಾಡಿರೋ ವೃತ್ತದಲ್ಲಿ ಹಾಕಿರುವ ನಾಮಫಲಕವನ್ನ ತೆರವುಗೊಳಿಸಬೇಕು ಅಂತಾ ಒತ್ತಾಯಿಸಿ, ಗಡುವನ್ನೂ ನೀಡಲಾಗಿತ್ತು.
ಆ ಗಡುವು ಮುಕ್ತಾಯವಾಗಿದ್ದು, ಪ್ರತಿಭಟನಾ ಮೆರವಣಿಗೆ ಟಿಪ್ಪು ಸರ್ಕಲ್ ಗೆ ಬಂದು ನಾವೇ ನಾಮಫಲಕ ಕಿತ್ತೊಗಿತೀವಿ ಅಂತಾ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದಾರೆ. ಹೀಗಾಗಿ ಟಿಪ್ಪು ಸರ್ಕಲ್ ಬಳಿ ಇರೋ ಏರಿಯಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.