ಟಿಪ್ಪು ಶಾಂತಿಯಿಂದ ವಿರಮಿಸಲಿ

ಗುರುವಾರ, 3 ನವೆಂಬರ್ 2016 (10:17 IST)
ಬೆಂಗಳೂರು: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದ್ದರೂ, ಅದನ್ನು ಸರಕಾರ ಯಾವ ಉದ್ದೇಶಕ್ಕಾಗಿ ಆಚರಿಸುತ್ತಿದೆ? ಅದರಿಂದ ಏನು ಪ್ರಯೋಜನವಿದೆ? ಎಂದು ಹೈ ಕೋರ್ಟ್ ಸರಕಾರವನ್ನು ಪ್ರಶ್ನಿಸಿದೆ.
 
ಸರಕಾರದ ಅಡಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆ ಎನ್ನುವ ಕುರಿತು ರಾಜ್ಯಾದ್ಯಂತ ವಿರೋಧಗಳು ಹಾಗೂ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಂಜುನಾಥ್ ಎಂಬುವರು ರಾಜ್ಯ ಸರಕಾರ ನ. 10 ರಂದು ಆಚರಿಸುತ್ತಿರುವ ಟಿಪ್ಪು ಜಯಂತಿಗೆ ತಡೆ ಕೋರಿ ಹೈ ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.
 
ಅದರ ವಿಚಾರಣೆ ನಡೆಸಿದ ಸಿಜೆ ಎಸ್.ಕೆ. ಮುಖರ್ಜಿ, ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತ ಅಂದಿನ ಸಂಸ್ಥಾನವೊಂದರ ರಾಜನಾಗಿದ್ದ. ಬ್ರಿಟಿಷರು ನಿಜಾಮರ ಮೇಲೆ ದಾಳಿ ಮಾಡಿದ್ದರಿಂದ, ಅವರು ಪ್ರತಿಯಾಗಿ ಯುದ್ಧ ಮಾಡಿದ್ದಾರೆ. ಹಾಗೆಂದು ನಿಜಾಮರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
 
ಅಲ್ಲದೆ ಟಿಪ್ಪು ಜಯಂತಿ ಆಚರಣೆ ಸರಕಾರಕ್ಕೇ ದೊಡ್ಡ ತಲೆನೋವು. ಹೀಗಿದ್ದಾಗಲೂ ಟಿಪ್ಪು ಜಯಂತಿ ಆಚರಿಸುವ ಅಗತ್ಯವಾದರೂ ಏನಿದೆ. ಎಲ್ಲ ರಾಜರಂತೆ ಟಿಪ್ಪು ಕೂಡಾ ತಮ್ಮ ಸಂಸ್ಥಾನ ಉಳಿಸಿಕೊಳ್ಳಲು ಯುದ್ಧ ಮಾಡಿದ್ದಾರೆ. ಹಾಗಾಗಿ ಟಿಪ್ಪು ಶಾಂತಿಯಿಂದ ವಿರಮಿಸಲಿ ಎಂದು ಸಿಜೆ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಅರ್ಜಿ ವಿಚಾರಣೆ ಇವತ್ತು ಮತ್ತೆ ಕೈಗೆತ್ತಿಕೊಳ್ಳಲಿದ್ದು, ನ್ಯಾಯಾಲಯದ ಆದೇಶ ಏನು ಎಂಬುದು ಕುತೂಹಲವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ