ಇಂದು ಕರ್ನಾಟಕ ಬಂದ್

ಶನಿವಾರ, 30 ಜುಲೈ 2016 (07:14 IST)
ಮಹದಾಯಿ ನ್ಯಾಯಾಧಿಕರಣ ರಾಜ್ಯದ ಮಧ್ಯಂತರ ಅರ್ಜಿ ವಜಾಗೊಳಿಸಿರುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ಇಂದು ನಡೆಯುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ, ಆಟೋ ಮಾಲೀಕರ ಸಂಘ, ಎಪಿಎಂಸಿ ವರ್ತಕರ ಸಂಘ, ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ದೈನಂದಿನ ಅಗತ್ಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಬಹುತೇಕ ಸಾರ್ವಜನಿಕ ಬಸ್‌ ಸಂಚಾರ ಸ್ಥಗಿತವಾಗಲಿದ್ದು, ಹೋಟೆಲ್‌ಗಳು ಸಂಪೂರ್ಣವಾಗಿ ಬಂದ್‌ ಆಗಲಿವೆ. ಆದರೆ ಹಾಲು ಪೂರೈಕೆ, ತರಕಾರಿ, ಹಣ್ಣು ಹಾಗೂ ಆಂಬ್ಯುಲೆನ್ಸ್‌ನಂತಹ ಅಗತ್ಯ ಸೇವೆಗಳು ದೊರೆಯಲಿವೆ. ಆಸ್ಪತ್ರೆ, ಮೆಡಿಕಲ್‌ ಶಾಪ್‌ಗಳು ತೆರೆದಿರಲಿವೆ.

ಮಹಾದಾಯಿ ನ್ಯಾಯಮಂಡಳಿ ಕ್ರಮವನ್ನು ವಿರೋಧಿಸಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಸಲು ಕನ್ನಡ ಚಿತ್ರರಂಗ ಮುಂದಾಗಿದೆ.ಸಾ.ರಾ.ಗೋವಿಂದ ನೇತೃತ್ವದಲ್ಲಿ ಬೆಂಗಳೂರಿನ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲಾಗುವುದು. ಹಿರಿಯ ನಟ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ನಟ, ನಟಿಯರು, ನಿರ್ಮಾಪಕರು, ಸಹಕಲಾವಿದರು ಹಾಗೂ ತಂತ್ರಜ್ಞರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕನ್ನಡಪರ ಸಂಘಟನೆಗಳು ಮುಂದಾಗಿವೆ.

ಬಂದ್‌ ಹೆಸರಿನಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ